ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಘೋಷಿಸಿಲ್ಲ: ರಮಾನಾಥ ರೈ

Update: 2019-08-21 16:40 GMT

ಕಾಪು: ರಾಜ್ಯದಲ್ಲಿ ಪ್ರವಾಹ ಅವಲೋಕಿಸಿದ ಕೇಂದ್ರ ಸರ್ಕಾರ, ಮುಖ್ಯಮಂತ್ರಿ ದೆಹಲಿಗೆ ಎರಡು ಬಾರಿ ತೆರಳಿ ಬರಿಗೈಲಿ ವಾಪಾಸದರೂ ಇನ್ನೂ ಪರಿಹಾರ ಘೋಷಿಸಿಲ್ಲ ಎಂದು ಕೆಪಿಸಿಸಿ ನಿಯೋಗದ ಅಧ್ಯಕ್ಷ ಬಿ. ರಮಾನಾಥ ರೈ ಆರೋಪಿಸಿದ್ದಾರೆ.

ಅವರು ಮಳೆ ಹಾನಿ ನಷ್ಟದ ಸಮೀಕ್ಷೆಗಾಗಿ ಕಾಪುವಿಗೆ ಬುಧವಾರ ಭೇಟಿ ನೀಡಿ ರಾಜೀವ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿಗಳು ಆಗಮಿಸಿ ಮಳೆಯಿಂದ ಹಾನಿಗೊಳಗಾದವರಿಗೆ ತುರ್ತು ರೂ. 10 ಸಾವಿರ ಹಾಗೂ ಶಾಶ್ವತ ಪರಿಹಾರ ಘೋಷಿಸಿ ತೆರಳಿ ದ್ದಾರೆ. ಆದರೆ ಅದು ಸಂತ್ರಸ್ತರಿಗೆ ತಲುಪಿಲ್ಲ ಎಂದ ಅವರು, ಪ್ರಧಾನಿ ಭೂತಾನ್ ಪ್ರವಾಸದಲ್ಲಿ ಮಕ್ಕಳಿಂದ ಶಹಬ್ಬಾಸ್‍ಗಿರಿ ಗಿಟ್ಟಿಸುವುದನ್ನು ಬಿಟ್ಟು ದೇಶದ ನೆರೆ ಸಂತ್ರಸ್ತರ ಕಣ್ಣೀರೊರೆಸುವ ಮೂಲಕ ಶಹಬ್ಬಾಸ್‍ಗಿರಿ ಗಿಟ್ಟಿಸಲಿ ಎಂದು ಒತ್ತಾಯಿಸಿದರು. 

ಶಾಸಕ ಯು.ಟಿ. ಖಾದರ್ ಮಾತನಾಡಿ, ರಾಜ್ಯದಲ್ಲಿ ಪ್ರವಾಹದಿಂದ ಸೊತ್ತು ನಷ್ಟಕ್ಕೊಳಗಾದ ಕುಟುಂಬಕ್ಕೆ ತಲಾ ಕನಿಷ್ಠ 50 ಸಾವಿರ ವಿತರಿಸಬೇಕು. ನೆರೆ ಸಂತ್ರಸ್ತರಿಗೆ ಸ್ಪಂಧಿಸಲು ಬಿಜೆಪಿಗೆ ಕೊರತೆ ಏನು ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದೂ, ಕೇಂದ್ರಕ್ಕೆ ಒತ್ತಾಯ ತಂದು ಪರಿಹಾರ ತರಿಸುವಲ್ಲಿಯೂ ಎಡವಿದ್ದಾರೆ.  ಮಳೆ ಹಾನಿ ಕುರಿತಂತೆ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು. ಬಿಜೆಪಿಯು ಮಂತ್ರಿಗಿರಿಯ ವಿಷಯದಲ್ಲಿಯೇ ಕಾಲಹರಣ ಮಾಡುತ್ತಿರುವ ಶಾಸಕರು ನೆರೆ ಸಂತ್ರಸ್ತರಿಗೆ ಪರಿಹಾರ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಘೋಷಿಸಿದ ತುರ್ತು ಪರಿಹಾರವನ್ನು ಶೀಘ್ರವಾಗಿ ವಿತರಿಸದಿದ್ದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಕಾಪು ತಾಲ್ಲೂಕು: ರೂ.36,47,000 ಲಕ್ಷ ಹಾನಿ: ಕಾಪು ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ಮಾಹಿತಿಯಂತೆ ರೂ.36,47,000 ಲಕ್ಷದಷ್ಟು ಮಳೆಯಿಂದ ಹಾನಿಯಾಗಿದ್ದು, ರೂ.12,93,000 ಮಾತ್ರ ಪರಿಹಾರ ವಿತರಿಸಲಾಗಿದೆ. ಹಾನಿಯ ಬಗ್ಗೆ ಕೃಷಿ, ತೋಟಗಾರಿಕೆ, ಮೀನುಗಾರಿಕಾ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ, ಕಾಪು ಬ್ಲಾಕ್ ದಕ್ಷಿಣ ಅಧ್ಯಕ್ಷ ನವೀನಚಂದ್ರ ಸುವರ್ಣ, ಉತ್ತರ ಅಧ್ಯಕ್ಷ ಪ್ರವೀಣ್ ಶೆಟ್ಟಿ, ತಾಪಂ ಸದಸ್ಯೆ ಚಂದ್ರಿಕಾ ಕೇಳ್ಕರ್, ಪ್ರಮುಖರಾದ ವಿಶ್ವಾಸ್ ಅಮೀನ್, ಇಸ್ಮಾಯಿಲ್ ಆತ್ರಾಡಿ, ಎಚ್.ಅಬ್ದುಲ್ಲಾ, ಮಹಮ್ಮದ್ ಸಾದಿಕ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News