ಕೆವಿನ್ ಜೋಸೆಫ್ ಹತ್ಯೆ ಪ್ರಕರಣ: 10 ಮಂದಿ ಅಪರಾಧಿಗಳು

Update: 2019-08-22 15:42 GMT

ಹೊಸದಿಲ್ಲಿ, ಆ.22: ಕೇರಳದ ದಲಿತ ಕ್ರಿಶ್ಚಿಯನ್ ಕೆವಿನ್ ಜೋಸೆಫ್ ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ದೋಷಿಗಳೆಂದು ಕೊಟ್ಟಾಯಂನ ನ್ಯಾಯಾಲಯ ತೀರ್ಪು ನೀಡಿದೆ. ತನ್ನ ಸಮುದಾಯಕ್ಕೆ ಹೊರತಾದ ಮಹಿಳೆಯನ್ನು ಮದುವೆಯಾಗಿದ್ದ 23 ವರ್ಷದ ಜೋಸೆಫ್‌ನನ್ನು ಆತನ ಪತ್ನಿಯ ಬಂಧುಗಳು 2018ರಲ್ಲಿ ಹತ್ಯೆ ಮಾಡಿದ್ದರು. ಇದೊಂದು ಮರ್ಯಾದಾ ಹತ್ಯೆ ಪ್ರಕರಣವಾಗಿದೆ ಎಂದು ಪ್ರಧಾನ ಸೆಷನ್ಸ್ ಕೋರ್ಟ್ ತಿಳಿಸಿದೆ.

ಅಪರಾಧಿಗಳಲ್ಲಿ ಜೋಸೆಫ್ ಪತ್ನಿಯ ಸಹೋದರನೂ ಸೇರಿದ್ದಾನೆ. ಪತ್ನಿಯ ತಂದೆ ಸಹಿತ ನಾಲ್ವರನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಖುಲಾಸೆಗೊಳಿಸಲಾಗಿದೆ. ಅಪರಾಧಿಗಳಿನೆ ನೀಡುವ ಶಿಕ್ಷೆಯ ಪ್ರಮಾಣವನ್ನು ಪ್ರಧಾನ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶ ಸಿಎಸ್ ಜಯಚಂದ್ರ ಆಗಸ್ಟ್ 24ರಂದು ಘೋಷಿಸಲಿದ್ದಾರೆ. ನೀನು ಎಂಬ ಯುವತಿಯನ್ನು ಪ್ರೀತಿಸಿ ರಿಜಿಸ್ಟರ್ಡ್ ಮದುವೆಯಾಗಿದ್ದ. ಇದಕ್ಕೆ ಯುವತಿಯ ಮನೆಯವರ ವಿರೋಧವಿತ್ತು. 2018ರ ಮೇ 27ರಂದು ಜೋಸೆಫ್‌ನ ಮನೆಗೆ ದಾಳಿ ನಡೆಸಿದ್ದ ಗುಂಪೊಂದು ಜೋಸೆಫ್ ಹಾಗೂ ಆತನ ಸಂಬಂಧಿಯನ್ನು ಮನೆಯಿಂದ ಹೊರಗೆಳೆದು ಹಲ್ಲೆ ನಡೆಸಿತ್ತು. ಬಳಿಕ ಸಂಬಂಧಿಯನ್ನು ಬಿಟ್ಟು, ಜೋಸೆಫ್‌ನನ್ನು ಅಪಹರಿಸಿತ್ತು. ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಮರುದಿನ ಜೋಸೆಫ್ ಮೃತದೇಹ ಕೊಲ್ಲಂ ಜಿಲ್ಲೆಯಲ್ಲಿ ಹಳ್ಳವೊಂದರಲ್ಲಿ ಪತ್ತೆಯಾಗಿತ್ತು.

ತನ್ನ ಪುತ್ರನ ಸಾವಿಗೆ ಪೊಲೀಸರ ನಿಷ್ಕ್ರಿಯತೆ ಕಾರಣ. ದೂರು ನೀಡಿದ್ದರೂ ಅವರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದರು. ಜೋಸೆಫ್ ಹತ್ಯೆಯನ್ನು ಖಂಡಿಸಿ ಗ್ರಾಮದಲ್ಲಿ ತೀವ್ರ ಪ್ರತಿಭಟನೆಯೂ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News