ಚಂದಿರನ ಮೊದಲ ಚಿತ್ರವನ್ನು ಕಳುಹಿಸಿದ ಚಂದ್ರಯಾನ-2

Update: 2019-08-22 16:36 GMT

ಹೊಸದಿಲ್ಲಿ,ಆ.22: ಭಾರತದ ಮಹತ್ವಾಕಾಂಕ್ಷೆಯ ಒಂದು ಸಾವಿರ ಕೋಟಿ ರೂ.ವೆಚ್ಚದ ಚಂದ್ರಯಾನ-2 ತೆಗೆದಿರುವ ಚಂದ್ರನ ಮೊದಲ ಚಿತ್ರವನ್ನು ಇಸ್ರೋ ಗುರುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಆ.21ರಂದು ಚಂದ್ರನ ಮೇಲ್ಮೈನಿಂದ ಸುಮಾರು 2,650 ಕಿ.ಮೀ.ಎತ್ತರದಿಂದ ಈ ಚಿತ್ರವನ್ನು ತೆಗೆಯಲಾಗಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರನ ಮೇಲಿನ ಎರಡು ಮಹತ್ವದ ಹೆಗ್ಗುರುತುಗಳಾಗಿರುವ ಅಪೋಲೊ ಕುಳಿ ಮತ್ತು ಬಟ್ಟಲಿನಾಕಾರದ ಇನ್ನೊಂದು ಕುಳಿ ಮೇರ್ ಓರಿಯಂಟೇಲ್ ಅನ್ನು ಚಿತ್ರವು ತೋರಿಸಿದೆ.

ನಾಸಾದ ಅಪೋಲೊ ಚಂದ್ರ ಅಭಿಯಾನಗಳ ಹೆಸರನ್ನು ಹೊಂದಿರುವ ಅಪೋಲೊ ಕುಳಿಯು 538 ಕಿ.ಮೀ.ಅಗಲವಾಗಿದ್ದು,ಚಂದ್ರನ ದಕ್ಷಿಣ ಗೋಲಾರ್ಧದಲ್ಲಿದೆ. ನಾಸಾ ಹೇಳುವಂತೆ ಅಪೋಲೊದೊಳಗೆ ಹಲವಾರು ಸಣ್ಣ ಕುಳಿಗಳಿದ್ದು,ಇವುಗಳಿಗೆ ದಿವಂಗತ ನಾಸಾ ಗಗನಯಾನಿಗಳು ಮತ್ತು ಅಧಿಕಾರಿಗಳ ಹೆಸರುಗಳನ್ನಿರಿಸಲಾಗಿದೆ. ಇಂತಹ ಏಳು ಕುಳಿಗಳು ಬಾಹ್ಯಾಕಾಶದಲ್ಲಿ ಭಸ್ಮಗೊಂಡಿದ್ದ ನಾಸಾದ ಕೊಲಂಬಿಯಾ ಅಂತರಿಕ್ಷ ನೌಕೆಯಲ್ಲಿದ್ದ ಗಗನಯಾತ್ರಿಗಳ ಹೆಸರುಗಳನ್ನು ಹೊಂದಿವೆ.

ಮೇರ್ ಓರಿಯಂಟೇಲ್ ಮೂರು ಶತಕೋಟಿ ವರ್ಷಗಳಿಗೂ ಹಿಂದಿನದು ಎನ್ನಲಾಗಿದ್ದು, ಸುಮಾರು 950 ಕಿ.ಮೀ.ಅಗಲವಾಗಿದೆ. ಗೂಳಿಯ ಕಣ್ಣಿನ ಆಕಾರದಲ್ಲಿರುವ ಇದು ಕ್ಷುದ್ರಗ್ರಹ ಆಕಾರದ ವಸ್ತುವಿನ ಅಪ್ಪಳಿಸುವಿಕೆಯಿಂದ ರೂಪುಗೊಂಡಿದೆ. ನಾಸಾ ಹೇಳುವಂತೆ ಚಂದ್ರನ ಮೇಲಿನ ಅತ್ಯಂತ ಮಹತ್ವಪೂರ್ಣ ಹೆಗ್ಗುರುತಾಗಿರುವ ಮೇರ್ ಓರಿಯಂಟೇಲ್‌ನ್ನು ಭೂಮಿಯಿಂದ ವೀಕ್ಷಿಸುವುದು ತುಂಬ ಕಠಿಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News