×
Ad

ಬಂಡೆಗಲ್ಲು ಬಿದ್ದು ರೈಲುಹಳಿಗಳು ಜಖಂ: ಆ.25ರವರೆಗೆ ಹಾಸನ-ಮಂಗಳೂರು ರೈಲು ಸಂಚಾರ ರದ್ದು

Update: 2019-08-22 22:24 IST

ಮಂಗಳೂರು, ಆ.22: ರಾಜ್ಯದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ- ಮಂಗಳೂರು ರೈಲು ಮಾರ್ಗದಲ್ಲಿ ಬೃಹತ್ ಪ್ರಮಾಣದ ಬಂಡೆಗಲ್ಲುಗಳು ಬಿದ್ದು, ರೈಲುಹಳಿಗಳು ಜಖಂಗೊಂಡಿವೆ. ಈ ಹಿನ್ನೆಲೆಯಲ್ಲಿ ಆ.25ರಂದು ರಾತ್ರಿ 10ರವರೆಗೆ ರೈಲು ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಹಾಸನದ ಸಕಲೇಶಪುರದಿಂದ ಸುಬ್ರಹ್ಮಣ್ಯವರೆಗೆ ಸುಮಾರು 59ಕ್ಕೂ ಹೆಚ್ಚು ಕಡೆ ಭೂ ಕುಸಿತ, ಮರಗಳ ಧರಾಶಾಹಿ, ಬಂಡೆಗಲ್ಲುಗಳು ಬೀಳುತ್ತಿರುವ ಘಟನೆಗಳು ಪುನಃ ಸಂಭವಿಸುತ್ತಿವೆ. ಮಾರ್ಗದ ವಿವಿಧೆಡೆ ಬೃಹತ್ ಬಂಡೆಗಲ್ಲುಗಳು ರೈಲು ಹಳಿ ಮೇಲೆ ಬಿದ್ದಿರುವ ರಭಸಕ್ಕೆ ರೈಲು ಹಳಿಗಳು ಜಖಂಗೊಂಡಿವೆ.

ದುರ್ಗಮ ಹಾದಿಯಲ್ಲೂ ಕಾರ್ಮಿಕರು ಹಾಗೂ ಬೃಹತ್ ಮಶಿನ್‌ಗಳಿಂದ ಬಂಡೆಗಲ್ಲುಗಳ ತೆರವು ಕಾರ್ಯ ನಡೆಯುತ್ತಿದೆ. ರೈಲು ಹಳಿಗಳ ದುರಸ್ತಿ ಕಾರ್ಯವೂ ಸಮರೋಪಾದಿಯಲ್ಲಿ ಮುಂದುವರಿದಿದೆ. ರೈಲ್ವೆ ವಲಯ ಮತ್ತು ವಿಭಾಗೀಯ ಅಧಿಕಾರಿಗಳ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.

ಆ.24ರಂದು ಬೆಂಗಳೂರಿಗೆ ತೆರಳಲಿದ್ದ ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ (16516) ರೈಲು ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಆ.23 ಮತ್ತು 24ರಂದು ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಬೇಕಿದ್ದ ‘ಕಣ್ಣೂರು/ಕಾರವಾರ-ಬೆಂಗಳೂರು’ ಎಕ್ಸ್‌ಪ್ರೆಸ್ (16518/16524) ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಆ.23 ಮತ್ತು 24ರಂದು ಬೆಂಗಳೂರಿನಿಂದ ಕಾರವಾರಕ್ಕೆ ತೆರಳಲಿದ್ದ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ (16511/16513) ರೈಲು ಸಂಚಾರ ರದ್ದುಗೊಂಡಿದೆ. ಆ.25ರಂದು ಬೆಂಗಳೂರಿನಂದ ಮಂಗಳೂರಿಗೆ ಆಗಮಿಸಲಿದ್ದ ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (16575) ರೈಲು ಸಂಚಾರ ರದ್ದುಗೊಂಡಿದೆ.

ಭಾಗಶಃ ರದ್ದು: ಆ.25ರಂದು ಕಾರವಾರದಿಂದ ಬೆಂಗಳೂರಿಗೆ ತೆರಳಲಿದ್ದ ಕಾರವಾರ-ಮಂಗಳೂರು ಎಕ್ಸ್‌ಪ್ರೆಸ್ (16514) ರೈಲು ಕಾರವಾರದಿಂದ ಮಂಗಳೂರು ಜಂಕ್ಷನ್ ನಡುವೆ ಭಾಗಶಃ ರದ್ದುಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News