ರವಿದಾಸ್ ಮಂದಿರ ಧ್ವಂಸ ವಿರುದ್ಧ ದಲಿತರ ಪ್ರತಿಭಟನೆ: ದೂರ ಸರಿದ ಬಿಎಸ್‌ಪಿ

Update: 2019-08-22 17:02 GMT

ಲಕ್ನೋ,ಆ.22: ರವಿದಾಸ ಮಂದಿರವನ್ನು ಧ್ವಂಸ ಮಾಡಿರುವುದನ್ನು ವಿರೋಧಿಸಿ ದಲಿತರು ಹೊಸದಿಲ್ಲಿಯ ತುಘಲಕಾಬಾದ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಯಿಂದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ದೂರ ಸರಿದಿದೆ. ತನ್ನ ಎಲ್ಲ ಹೋರಾಟಗಳನ್ನೂ ಕಾನೂನಿನ ವ್ಯಾಪ್ತಿಯಲ್ಲೇ ನಡೆಸಲಾಗುವುದು ಎಂದು ಬಿಎಸ್‌ಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ದಿಲ್ಲಿಯಲ್ಲಿ, ಮುಖ್ಯವಾಗಿ ತುಘಲಕಾಬಾದ್‌ನಲ್ಲಿ ನಡೆದಿರುವ ಧ್ವಂಸ ಪ್ರಕರಣಗಳು ಅನ್ಯಾಯವಾಗಿವೆ ಮತ್ತು ಇದರಲ್ಲಿ ಬಿಎಸ್‌ಪಿ ಏನೂ ಮಾಡುವಂತಿಲ್ಲ. ಬಿಎಸ್‌ಪಿ ಸದಾ ಸಂವಿಧಾನ ಮತ್ತು ಕಾನೂನನ್ನು ಗೌರವಿಸುತ್ತದೆ. ಪಕ್ಷದ ಎಲ್ಲ ಹೋರಾಟಗಳು ಕಾನೂನಿನ ವ್ಯಾಪ್ತಿಯಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳದ ಬಿಎಸ್‌ಪಿ ಮತ್ತು ಅದರ ಸದಸ್ಯರ ಪದ್ಧತಿ ಇಂದೂ ಜಾರಿಯಲ್ಲಿದೆ. ಆದರೆ ಇತರ ಪಕ್ಷಗಳು ಮತ್ತು ಸಂಘಟನೆಗಳು ಈ ತತ್ವದಿಂದ ದೂರ ಸರಿದಿವೆ. ಸಂತರು, ಗುರುಗಳು ಮತ್ತು ಉನ್ನತ ಪುರುಷರಿಗೆ ಗೌರವ ನೀಡುವ ನಿಟ್ಟಿನಲ್ಲಿ ನಾವು ಮುಗ್ಧ ಜನರಿಗೆ ತೊಂದರೆ ನೀಡಬಾರದು ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದ ನಂತರ ಹೇರಲಾಗುವ ಸೆಕ್ಷನ್ 144ಅನ್ನು ಉಲ್ಲಂಘಿಸದಂತೆ ಅವರು ತನ್ನ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಸೆಕ್ಷನ್ 144ಅನ್ನು ಹೇರಲಾಗಿರುವ ಪ್ರದೇಶಗಳಿಗೆ ತೆರಳಲು ಪ್ರಯತ್ನಿಸಿ ಸರಕಾರಕ್ಕೆ ನಿಮ್ಮ ವಿರುದ್ಧ ಸರ್ವಾಧಿಕಾರಿ ಮತ್ತು ಪ್ರತಿಕಾರ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡಬೇಡಿ ಎಂದು ಬಿಎಸ್‌ಪಿ ವರಿಷ್ಟೆ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News