ಮಜಲುತೋಟ: ಬೃಹತ್ ಬಂಡೆ ಉರುಳಿ ರಸ್ತೆ ಸಂಪರ್ಕ ಕಡಿತ, ಮನೆಯ ಆವರಣ ಗೋಡೆಗೆ ಹಾನಿ

Update: 2019-08-22 17:12 GMT

 ಉಳ್ಳಾಲ: ಮುನ್ನೂರು ಗ್ರಾಮ ಪಂ. ವ್ಯಾಪ್ತಿಯ ಮಜಲುತೋಟದಲ್ಲಿ ಬೃಹತ್ ಬಂಡೆಕಲ್ಲು ಹಾಗೂ ಗುಡ್ಡೆ ಜರಿದು ಬಿದ್ದ ಪರಿಣಾಮ ಸೋಮನಾಥ ಉಳಿಯದಿಂದ ರಾಣಿಪುರ ಉಳಿಯ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತವಾಗಿದ್ದು ಸುಮಾರು 250ಮನೆಗಳಿಗೆ ಸಂಪರ್ಕವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಸಮೀಪದ ನಾರಾಯರಣ ಎಂಬವರ ಮನೆ ಆವರಣ ಗೋಡೆಗೆ ಹಾನಿಯಾಗಿದೆ.

ಮಜಲುತೋಟದ ನಾರಾಯಣ ಎಂಬವರ ಮನೆಯ ಕಂಪೌಂಡ್ ಮತ್ತು ರಸ್ತೆಗೆ ಗುರುವಾರ ತಡರಾತ್ರಿ 2.30ರ ಹೊತ್ತಿಗೆ ಬೃಹತ್ ಬಂಡೆಕಲ್ಲು ಉರುಳಿದೆ. ರಸ್ತೆಯ ಮೇಲೆಯೇ ಬೃಹತ್ ಗಾತ್ರದ ಕಲ್ಲು ಉರುಳಿ ಬಿದ್ದಿದು. ಇದನ್ನು ತೆರವುಗೊಳಿಸಲು ಹೆಚ್ಚು ಕಾಲಾವಕಾಶ  ಬೇಕಾಗಿರುವುದರಿಂದ ಅಲ್ಲಿಯವರೆಗೆ ರಸ್ತೆ ಸಂಚಾರ ಸಂಪೂರ್ಣ ಕಡಿತವಾಗಲಿದೆ. 20ವರ್ಷಗಳ ಹಿಂದೆ ರಸ್ತೆ ನಿರ್ಮಾಣದ ಸಂದರ್ಭ ಬಂಡೆಕಲ್ಲಿನ ಗಾತ್ರದಿಂದಾಗಿ ತೆರವುಗೊಳಿಸಲು ಅಸಾಧ್ಯವಾಗಿತ್ತು. ಹಾಗೆಯೇ ಬಿಟ್ಟು ರಸ್ತೆ ನಿರ್ಮಿಸಿದ್ದರಿಂದಾಗಿ ಅಪಾಯವನ್ನು ಆಹ್ವಾನಿಸುತ್ತಿತ್ತು. ಈ ಭಾಗದಲ್ಲಿ ಜನರು ಬಂಡೆಕಲ್ಲಿನಡಿಯಿಂದ ತೆರಳುವಾಗ ಆತಂಕಪಡುತ್ತಿದ್ದರು. ಅದೃಷ್ಟವಶಾತ್ ಬಂಡೆಕಲ್ಲು ರಾತ್ರಿ ಹೊತ್ತಿನಲ್ಲಿ ಉರುಳಿರುವುದರಿಂದ ರಸ್ತೆಯಲ್ಲಿ ಸಂಚಾರವಿಲ್ಲದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ ಸಮೀಪದಲ್ಲೇ ಮನೆಯೂ ಇದ್ದು, ಕಂಪೌಂಡಿಗೆ ಮಾತ್ರ ಬಿದ್ದಿರುವುದು ಪವಾಡಸದೃಶವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತೆರವು ಕಾರ್ಯಾಚಾರಣೆಗೆ ಮೂರು ದಿನಗಳ ಕಾಲಾವಕಾಶ ಬೇಕಾಗುತ್ತದೆ. ಬಂಡೆಕಲ್ಲು ಗಾತ್ರ ದೊಡ್ಡದಾಗಿರುವುದರಿಂದ ಕಂಪ್ರೆಸ್ಸರ್ ಮೂಲಕ ಅದನ್ನು ಒಡೆದು ತೆರವುಗೊಳಿಸಬೇಕಾಗುತ್ತದೆ.  ಹಿಂದಿನಿಂದಲೂ ಅಪಾಯದ ಕುರಿತು ಗ್ರಾಮಸ್ಥರಿಂದ ದೂರುಗಳಿತ್ತು. ಆದರೆ ಜನವಸತಿ ಪ್ರದೇಶವಾಗಿರುವುದರಿಂದ ಬಂಡೆಕಲ್ಲು ಒಡೆಯಲು ಯಾವುದೇ ಅವಕಾಶವಿರಲಿಲ್ಲ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಭಂಡಾರಬೈಲು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ವಿಲ್ಮಾ ವಿಲ್‍ಫ್ರೆಡ್ ಡಿಸೋಜ, ಸದಸ್ಯ ನವೀನ್ ಡಿಸೋಜ, ಗ್ರಾಮಕರಣಿಕ ನಯನಾ, ಪಿಡಿಒ  ರವೀಂದ್ರ ನಾಯಕ್, ಪಂಚಾಯಿತಿ ರಾಜ್ ಎಂಜಿನಿಯರ್ ನಿತಿನ್ ಕುಮಾರ್ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News