ಪುತ್ತೂರು : ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕಿಯ ಸಹಾಯಕ್ಕೆ ಹೆತ್ತವರ ಮನವಿ

Update: 2019-08-22 17:31 GMT

ಪುತ್ತೂರು : ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗುತ್ತಾ ನಕ್ಕು ನಲಿಯುತ್ತಾ ಸಂತೋಷವಾಗಿರಬೇಕಾಗಿದ್ದ ಪುಟ್ಟ ಬಾಲಕಿಯೊಬ್ಬಳು ತನಗೆ ಬಾಧಿಸಿರುವ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದು, ಆಕೆಯ  ಚಿಕಿತ್ಸೆಯ ವೆಚ್ಚ ಭರಿಸಲಾಗದ ಬಡ ಹೆತ್ತವರು ಬಾಲಕಿಯ ಚಿಕಿತ್ಸೆಗಾಗಿ ಸಮಾಜದ ಸಹಾಯ ಹಸ್ತ ಯಾಚಿಸಿದ್ದಾರೆ. ಬಾಲಕಿಯ ಚಿಕಿತ್ಸೆಗೆ ಸಹೃದಯಿ ದಾನಿಗಳು ಮುಂದಾದರೆ ಈ ಬಾಲಕಿಯ ಬದುಕು ಹಸನಾಗಬಹುದು.

ಪುತ್ತೂರು ತಾಲೂಕಿನ ಕುಂಬ್ರ ನಿವಾಸಿ ಇಮ್ರಾನ್ ಎಂಬವರ ಪುತ್ರಿ ಫಾತಿಮತ್ ಅಮ್ನಾ ಕ್ಯಾನ್ಸರ್ ಪೀಡಿತೆಯಾಗಿ ಬಳಲುತ್ತಿರುವ ಬಾಲಕಿ. ನಡೆದಾಡಲು ಕೂಡ ಅಸಾಧ್ಯ ಸ್ಥಿತಿಯಲ್ಲಿರುವ ಆಕೆ ಹಾಸಿಗೆ ಹಿಡಿದ ಸ್ಥಿತಿಯಲ್ಲಿದ್ದಾಳೆ. 

ಕುಂಬ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿದ್ದ ಆಕೆಗೆ 5 ತಿಂಗಳ ಹಿಂದೆ ಶಾಲೆಗೆ ತೆರಳುತ್ತಿದ್ದ ವೇಳೆ ದಿಢೀರ್ ಆಗಿ ಕಾಲುನೋವು ಆರಂಭಗೊಂಡಿತ್ತು. ಕಾಲು ನೋವಿನ ಜೊತೆಗೆ ಜ್ವರವೂ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಜ್ವರದಿಂದ ಕಾಲು ನೋವು ಬಂದಿರಬಹುದು ಎಂದು ವೈದ್ಯರು ತಿಳಿಸಿದ್ದರು. ಆದರೆ ಜ್ವರ ಕಡಿಮೆಯಾದರೂ ಕಾಲು ನೋವು ಕಡಿಮೆಯಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆಯ ಕಾಲುಗಳಲ್ಲಿ ಕ್ಯಾನ್ಸರ್ ರೋಗ ಲಕ್ಷಣಗಳಿರುವ ಬಗ್ಗೆ ವೈದ್ಯರು ತಿಳಿಸಿದ್ದರು.

ಫಾತಿಮತ್ ಅಮ್ನಾಳ ತಂದೆ ಇಮ್ರಾನ್ ಅವರು ಲೋಕಜ್ಞಾನ ಅರಿವಿಲ್ಲದ ಮುಗ್ಧರು. ಬೀಡಿ ಸುತ್ತಿ ಮಕ್ಕಳನ್ನು ಸಾಕುತ್ತಿರುವ ತಾಯಿಯೇ ಈ ಕುಟುಂಬದ ಆಧಾರಸ್ಥಂಭ. ಎಳೆಯ ಪ್ರಾಯದಲ್ಲೇ ಮಗಳು ಹಾಸಿಗೆ ಹಿಡಿಯುವ ಸ್ಥಿತಿ ಬಂದಿರುವುದು ಹೆತ್ತವರನ್ನು ನಿತ್ಯ ಕಣ್ಣೀರಿಡುವಂತೆ ಮಾಡಿದೆ.

ಪೋಷಕರು ಫಾತಿಮತ್ ಅಮ್ನಾಳನ್ನು ಬೆಂಗಳೂರಿನ ಕ್ಯಾನ್ಸರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಸಲಹೆಯನ್ನು ಈಗಾಗಲೇ ಪಡೆದಿದ್ದಾರೆ. ಪೂರ್ತಿ ಚಿಕಿತ್ಸೆಗೆ ರೂ.9ಲಕ್ಷದಷ್ಟು ಖರ್ಚಾಗಲಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ಕ್ರೂಢೀಕರಿಸುವುದು ಹೇಗೆಂಬ ಚಿಂತೆಯಲ್ಲಿರುವ ಬಾಲಕಿಯ ಹೆತ್ತವರು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ. 

ನರವಿಗಾಗಿ ಕುಂಬ್ರ ವಿಜಯಾ ಬ್ಯಾಂಕ್ (ಬರೋಡಾ ಬ್ಯಾಂಕ್) ಶಾಖೆಯಲ್ಲಿ ಬಾಲಕಿ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದೆ. ಸಹಾಯ ಮಾಡಲಿಚ್ಚಿಸುವ ದಾನಿಗಳು ಫಾತಿಮತ್ ಅಮ್ನಾ, ಕುಂಬ್ರ ವಿಜಯಾ ಬ್ಯಾಂಕ್ ಶಾಖೆ ಖಾತೆ ಸಂಖ್ಯೆ124201111003564 ಐಎಫ್‍ಸಿ ಕೋಡ್ ವಿಐಜೆಬಿ-0001242 ಗೆ ಸಹಾಯ ಮಾಡಬಹುದು. ಬಾಲಕಿ ತಾಯಿ ಮೊಬೈಲ್ ಸಂಖ್ಯೆ-9902196832

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News