ತೆಂಕಿಲ ಸಂತ್ರಸ್ತರೊಂದಿಗೆ `ಕುಂಟುದ ಶಾಪ್' ವತಿಯಿಂದ ಸಹಭೋಜನ

Update: 2019-08-22 17:37 GMT

ಪುತ್ತೂರು: ಪುತ್ತೂರಿನ ತೆಂಕಿಲದಲ್ಲಿ ಗುಡ್ಡ ಕುಸಿತದ ಭೀತಿಯಿಂದ ಸ್ಥಳಾಂತರಗೊಂಡು ಸಮುದಾಯ ಭವನದಲ್ಲಿ ಆಶ್ರಯ ಪಡೆದು ಕೊಂಡಿರುವವರಿಗೆ ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಮರ್ಷಿಯಲ್ ಕಟ್ಟಡದಲ್ಲಿರುವ ಕುಂಟುದ ಶಾಪ್ ಡ್ರೆಸ್ ಮಳಿಗೆಯ ಮಾಲಕ ಖಾದರ್ ಹಾಜಿ ಕೆನರಾ ಅವರು ಸಹಭೋಜನದ ವ್ಯವಸ್ಥೆ ಮಾಡಿ ನಿರಾಶ್ರಿತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದರು. 

ಮಾಂಸಹಾರಿ ಭೋಜನ ವ್ಯವಸ್ಥೆ ಏರ್ಪಡಿಸಿದ್ದ ಖಾದರ್ ಹಾಜಿ ಅವರು ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ ಎಂಬ ಉದ್ದೇಶಕ್ಕೆ ಭೋಜನ ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದರು.

ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಶೆಟ್ಟಿ ಕಾವು ಮಾತನಾಡಿ ನೀವು ಸಂತ್ರಸ್ತರಲ್ಲ, ನಿಮ್ಮ  ಜೊತೆ ನಾವೆಲ್ಲರೂ ಇದ್ದೇವೆ ಯಾವುದೇ ಕಾರಣಕ್ಕೂ ನೀವು ಭಯ ಪಡಬೇಡಿ ಎಂದು ಧೈರ್ಯ ತುಂಬಿದರು.

ತಹಶೀಲ್ದಾರ್ ಅನಂತ ಶಂಕರ್ ಮಾತನಾಡಿ ಗುಡ್ಡ ಕುಸಿತದ ಭೀತಿ ಎದುರಾದ ತಕ್ಷಣವೇ ಯಾವುದೇ ಅನಾಹುತ ಆಗದಿರಲಿ ಎಂಬ ದೃಷ್ಟಿಯಲ್ಲಿ ಅಲ್ಲಿನ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಸದ್ಯ ಸಮುದಾಯ ಭವನದಲ್ಲಿ ಆಶ್ರಯ ಪಡೆದವರು ಯಾರೂ ಆತಂಕ ಪಡಬೇಕಾಗಿಲ್ಲ ಎಂದ ಅವರು ಖಾದರ್ ಹಾಜಿಯವರ ಮಾನವೀಯ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿ.ಪಂ ಶಿಕ್ಷಣ, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಖಾದರ್ ಹಾಜಿಯವರು ತನ್ನ ಸಂಪಾದನೆಯಲ್ಲಿ ಅಲ್ಪವನ್ನು ಕಷ್ಟದಲ್ಲಿರುವವರಿಗೆ ನೀಡುತ್ತಾ ಬಂದಿದ್ದು ಹೃದಯ ವೈಶಾಲ್ಯತೆ ಮೆರೆಯುತ್ತಿದ್ದಾರೆ, ಇದು ಇತರರಿಗೆ ಸ್ಪೂರ್ತಿಯಾಗಬೇಕು ಎಂದರು. ಎ.ಸಿ, ತಹಸೀಲ್ದಾರ್ ಎಲ್ಲರೂ ನಿಮ್ಮೊಂದಿಗಿದ್ದಾರೆ, ನೀವ್ಯಾರೂ ಭಯಪಡಬೇಕಾಗಿಲ್ಲ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ, ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಕಂದಾಯ ನಿರೀಕ್ಷಕ ದಯಾನಂದ, ನಗರಸಭೆ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ದಯಾನಂದ, ನಗರಸಭೆಯ ಅರುಣ್, ರೆಹಮಾನ್ ಸಂಪ್ಯ, ಮತ್ತಿತರರು ಉಪಸ್ಥಿತರಿದ್ದರು.

ಖಾದರ್ ಹಾಜಿಯವರ ಪತ್ನಿ ಝೊಹರಾ, ಪುತ್ರ ಜಾವೇದ್, ಪುತ್ರಿಯರು, ಹೇಮನಾಥ ಶೆಟ್ಟಿಯವರ ಪುತ್ರಿ ರಂಜಿತಾ, ಕುಂಟುದ ಶಾಪ್‍ನ ಇರ್ಶಾದ್ ಮತ್ತು ಬಿಲಾಲ್, ಕಮರುದ್ದೀನ್ ರೆಂಜಲಾಡಿ, ಜಮಾಲ್ ಕೂರ್ನಡ್ಕ ಮತ್ತಿತರರು ಸಹಕರಿಸಿದರು. ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News