ಇಎಸ್‌ಐ ಡಿಸ್ಪೆನ್ಸರಿಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ: ಆರೋಪ

Update: 2019-08-23 11:43 GMT

ಮಂಗಳೂರು, ಆ.23: ನಗರದ ಬಿಜೈಯ ಇಎಸ್‌ಐ ಡಿಸ್ಪೆನ್ಸರಿಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಕ್ಯಾನ್ಸರ್ ಪೀಡಿತ ಬಡ ರೋಗಿಯೊಬ್ಬರ ಚಿಕಿತ್ಸೆಗಾಗಿ ಅವರ ಕುಟುಂಬ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಎಸ್‌ಐ ರಾಜ್ಯ ಕಚೇರಿಯಿಂದ ಸೂಪರ್ ಸ್ಪೆಷಾಲಿಟಿ ಔಷಧಿ ಒದಗಿಸಲು ಒಪ್ಪಿಗೆ ನೀಡಿದೆ. ಆದರೆ ಔಷಧಿಯನ್ನೂ ಒದಗಿಸದೆ, ರೋಗಿಯ ಕುಟುಂಬಸ್ಥರು ಸಾಲ ಮಾಡಿ ಖರೀದಿಸಿದ ಔಷಧಿಯ ಬಿಲ್ ಪಾವತಿಗಾಗಿ ಅದನ್ನು ರಾಜ್ಯ ಕಚೇರಿಗೂ ಕಳುಹಿಸದೆ ಔಷಧಾಲಯದ ಸಿಬ್ಬಂದಿ ದುರ್ವತನೆ ತೋರಿರುವ ಬಗ್ಗೆ ರೋಗಿ ಕುಟುಂಬದಿಂದ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಇಎಸ್‌ಐ ನಿಗಮದ ಪ್ರಾದೇಶಿಕ ನಿರ್ದೇಶಕರು ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳಿಗೂ ರೋಗಿಯ ಕುಟುಂಬಸ್ಥರು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರ ಸಹಕಾರದಲ್ಲಿ ದೂರು ನೀಡಿದ್ದಾರೆ. 

ಕೇರಳದಲ್ಲಿ ದುಡಿಯುತ್ತಿರುವ ಮಂಗಳೂರಿನ ಅಬ್ದುಲ್ ಸುನೈಫ್ (ಇಎಸ್‌ಐ ನಂ:7204132675) ಎಂಬವರ ತಂದೆ ಮುಹಮ್ಮದ್ ಚೈಬಾವು ಕ್ಯಾನ್ಸರ್ ಪೀಡಿತರಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದರ ಸಂಬಂಧಪಟ್ಟ ಬಿಲ್ ಗಳನ್ನು ಇಎಸ್‌ಐ ಪಾವತಿಸಿದೆ. ಆದರೆ ರೋಗ ಉಲ್ಬಣಿಸಿದ ಕಾರಣ ದುಬಾರಿ ಔಷಧಿ (Tagrisso 80mg) ಪಡೆಯಲು ಸೂಚಿಸಿದ್ದಾರೆ. ಆದರೆ ಸುನೈಫ್ ಅವರು ಉದ್ಯೋಗದಲ್ಲಿರುವ ಸ್ಥಳ ಕೇರಳದಲ್ಲಿರುವ ನೆಪ ಮುಂದಿಟ್ಟು ಮೊದಲ ಒಂದೆರಡು ತಿಂಗಳು ಔಷಧ ನೀಡಲು ಮಂಗಳೂರಿನ ಇಎಸ್‌ಐ ನಿರಾಕರಿಸಿತು. ಈ ಮಧ್ಯೆ ಸುನೈಫ್ ಸಿಕ್ಕ ಸಿಕ್ಕಲ್ಲಿ ಸಾಲ ಮಾಡಿ ಒಂದು ತಿಂಗಳ ಔಷಧಿಯನ್ನು (1.84 ಲಕ್ಷ ರೂ. ಮೊತ್ತ) ಖರೀದಿಸಿದರು. ಇದೇ ವೇಳೆ ಅವರು ಇಎಸ್‌ಐ ಕರ್ನಾಟಕ ಕಚೇರಿಯನ್ನು ಸಂಪರ್ಕಿಸಿ ಹಲವು ಬಾರಿ ಮನವಿ ಸಲ್ಲಿಸಿದ ಮೇರೆಗೆ ರೋಗಿಗೆ ಸೂಪರ್ ಸ್ಪೆಷಾಲಿಟಿ ಔಷಧಿ ಕೊಡಲು ಒಪ್ಪಿಗೆ ಸೂಚಿಸಿತು. ಆದರೆ ಒಪ್ಪಿಗೆಯ ನಂತರವೂ ನಮಗೆ ಮಾಹಿತಿ ಇಲ್ಲ ಎಂಬ ನೆಪ ಮುಂದಿಟ್ಟು ಹೊರಗಡೆ ಖರೀದಿಸಿದ ಔಷಧಿಯ ಬಿಲ್ ಸ್ವೀಕರಿಸಲು ಔಷಧಾಲಯದ ಸಿಬ್ಬಂದಿ ನಿರಾಕರಿಸಿದ್ದಾರೆ. ಮತ್ತೆ ತಿಂಗಳ ಕಾಲ ಸತತ ಪ್ರಯತ್ನದಿಂದ ರಾಜ್ಯ ಕಚೇರಿ ಬಿಲ್ ಸ್ವೀಕರಿಸಲು ಒಪ್ಪಿಗೆ ಸೂಚಿಸಿದೆ. ಆ ನಂತರವೂ ಸತಾಯಿಸಿ (ದಿನಾಂಕ 1. 8. 2019)ಸ್ವೀಕರಿಸಲಾದ ಬಿಲನ್ನು ಆ. 22ರವರೆಗೂ ಬೆಂಗಳೂರಿಗೆ ಕಳುಹಿಸದೆ ಅಮಾನವೀಯವಾಗಿ ನಡೆದಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ‘ವಾರ್ತಾಭಾರತಿ’ ಜತೆ ಪ್ರತಿಕ್ರಿಯಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ‘‘ಕಳೆದ ಎರಡು ತಿಂಗಳಿನಿಂದ ರೋಗಿಗೆ ಓಷಧ ಇಲ್ಲದೆ ಪರದಾಡುವ ಸ್ಥಿತಿ ರೋಗಿ ಕುಟುಂಬದ್ದು. ದುಬಾರಿ ಬೆಲೆಯ ಔಷಧಿಯನ್ನು ಹೊರಗಡೆ ಖರೀದಿಸಲೂ ಕುಟುಂಬಕ್ಕೆ ಸಾಧ್ಯವಾಗದೆ ಕ್ಯಾನ್ಸರ್ ರೋಗಿ ವಿಪರೀತವಾದ ನೋವಿನಿಂದ ಚಿತ್ರಹಿಂಸೆಗೆ ಗುರಿಯಾಗಿದ್ದಾರೆ. ಕುಟುಂಬ ಅಸಹಾಯಕತೆ, ಹತಾಶೆಗೆ ಗುರಿಯಾಗಿದೆ. ಈ ಕುರಿತು ನಾನು ಖುದ್ದು ಕಚೇರಿಗೆ ಹೋದರೂ ಸರಿಯಾಗಿ ಮಾತನಾಡದೆ ಉಡಾಫೆಯ ಉತ್ತರ ನೀಡಲಾಗಿದೆ. ಪೊಲೀಸರನ್ನು ಕರೆಸುವ ಬೆದರಿಕೆಯನ್ನೂ ಇಎಸ್‌ಐ ಡಿಸ್ಪೆನ್ಸರಿ ಸಿಬ್ಬಂದಿ ನೀಡಿದ್ದಾರೆ’’ ಎಂದು ಹೇಳಿದ್ದಾರೆ. ‘‘ನಾನು ನಿನ್ನೆ ಡಿಸ್ಪೆನ್ಸರಿಗೆ ಭೇಟಿ ನೀಡುವ ಸಂದರ್ಭ ಅಲ್ಲಿ ಹಲವು ಮಂದಿ ಸರತಿಯಲ್ಲಿದ್ದರು. ರಮೇಶ್ ಸಾಲ್ಯಾನ್ ಎಂಬ ಹಿರಿಯ ನಾಗರಿಕರೊಬ್ಬರು 15 ಸಾವಿರ ರೂ. ಬೆಲೆಯ ಔಷಧಿಯ ಬಿಲ್ ಪಾವತಿಸಲು ದಾಖಲೆ ಸಲ್ಲಿಸಿದ ಒಂದೂವರೆ ವರ್ಷದಿಂದಲೂ ಸತಾಯಿಸಲಾಗುತ್ತಿರುವುದಾಗಿ ದೂರಿದ್ದಾರೆ. ಅದಾಗಲೇ ರೋಗ ಹಾಗೂ ಅದರ ಚಿಕಿತ್ಸೆಯಿಂದ ಜರ್ಝರಿತಾದವರನ್ನು ಈ ರೀತಿಯಲ್ಲಿ ಸತಾಯಿಸುವುದು ಸರಿಯಲ್ಲ. ಇಲಾಖೆಯ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ವಹಿಸಬೇಕು’’ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

‘‘ವೈದ್ಯರು ಸೂಚಿಸಿರುವ 10 ಮಾತ್ರೆಗಳ ಬೆಲೆ ಸುಮಾರು ಎರಡು ಲಕ್ಷದ ಆಸುಪಾಸು. ಇದನ್ನು ಇಎಸ್‌ಐನಿಂದಲೇ ನಾವು ಪಡೆಯಬೇಕಿತ್ತು. ಈ ಹಿಂದೆ ತೆಗೆದುಕೊಳ್ಳುತ್ತಿದ್ದ 10,000 ಬೆಲೆಯ ಮಾತ್ರೆಯನ್ನೇ ಮಂಗಳೂರಿನ ಇಎಸ್‌ಐ ಔಷಧಾಲಯದಲ್ಲಿ ನೀಡುತ್ತಿರಲಿಲ್ಲ. ಆರು ತಿಂಗಳು ಹೇಗೋ ಹಣ ಹೊಂದಿಸಿಕೊಂಡಿದ್ದೆವು. ಈಗ ಈ ಹೊಸ ಮಾತ್ರೆಗೆ ಇಎಸ್‌ಐ ಅಲ್ಲದೆ ಬೇರೆ ದಾರಿ ನಮಗೆ ಇರಲಿಲ್ಲ. ಹಾಗಾಗಿ ಮತ್ತೆ ಇಎಸ್‌ಐ ಮಂಗಳೂರು ಡಿಸ್ಪೆನ್ಸರಿ, ಕ್ಯಾಲಿಕಟ್ ಡಿಸ್ಪೆನ್ಸರಿಯಲ್ಲದೆ ಕ್ಯಾಲಿಕಟ್ ಎಸ್‌ಆರ್‌ಒ, ತ್ರಿಶ್ಶೂರ್ ಎಸ್‌ಆರ್‌ಒ, ಬೆಂಗಳೂರು ಎಸ್‌ಆರ್‌ಒ ಎಲ್ಲ ಕಡೆ ವಿಚಾರಿಸಿದೆವು. ಹಲವು ಸಲ ಇ ಮೇಲ್ ಮೂಲಕ ದೂರು ಕೊಟ್ಟೆವು. ಕೊನೆಗೆ ಸಾಲ ಮಾಡಿ ಮಾತ್ರೆ ಕೊಳ್ಳದೆ ಬೇರೆ ವಿಧಿಯಿರಲಿಲ್ಲ. ಈ ನಡುವೆ ನಮ್ಮ ಪರಿಸ್ಥಿತಿ ಅರಿತ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಮಂಗಳೂರಿನ ಇಎಸ್‌ಐ ನಿಗಮದ ಅಧಿಕಾರಿಯ ಬಳಿ ವಿಚಾರಿಸಿ, ಬಿಲ್ ಪಾಸ್ ಮಾಡಿಸುವ ಮತ್ತು ಮುಂದೆ ಬೇಕಾದ ಮಾತ್ರೆಗಳನ್ನು ಮಂಗಳೂರಿನಿಂದಲೇ ಕೊಡಿಸುವ ಭರವಸೆ ಇತ್ತರು. ಆ ಅಧಿಕಾರಿ ತನ್ನ ಮೇಲಾಧಿಕಾರಿಗಳ ಮೂಲಕ ಮಂಗಳೂರಿನ ಡಿಸ್ಪೆನ್ಸರಿಗೆ ನಿರ್ದೇಶನ ಕೊಟ್ಟಿದ್ದರೂ ನಮಗೆ ಸೂಚನೆ ಬಂದಿಲ್ಲ ಎಂಬ ನೆಪ ಹೇಳಿ ಬಿಲ್ ತೆಗೆದುಕೊಳ್ಳಲು ನಿರಾಕರಿಸಿದರು. ಡಿಸ್ಪೆನ್ಸರಿಯವರ ಈ ವರ್ತನೆ ಬಗ್ಗೆ ಹಿರಿಯ ಅಧಿಕಾರಿಯ ಗಮನಕ್ಕೆ ತಂದು ಅವರ ಮೂಲಕ ಹೇಳಿಸಿದಾಗ ಬಿಲ್ ಸ್ವೀಕರಿಸಿದರು. ಬಿಲ್ ಸ್ವೀಕರಿಸಿದ್ದು ಆಗಸ್ಟ್ 1ರಂದು. ಆದರೆ ಅದನ್ನು ಕಳುಹಿಸಿಯೇ ಇಲ್ಲ’’ ಎಂದು ಸುನೈಫ್ ಬೇಸರಿಸಿದ್ದಾರೆ.


‘‘ಸೂಪರ್‌ಸ್ಪೆಷಾಲಿಟಿ ಔಷಧಿಯ ಬಿಲ್‌ಗಳನ್ನು ಇಎಸ್‌ಐನ ರಾಜ್ಯ ಮೆಡಿಕಲ್ ಅಧಿಕಾರಿ ಮಂಜೂರು ಮಾಡುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸ್ಪೆನ್ಸರಿಯಿಂದ ಅವರಿಗೆ ನೇರವಾಗಿ ಕಳುಹಿಸಲು ಸೂಚನೆ ಬಂದಿದೆ. ನಾನು ನಿನ್ನೆಯೇ ಬಿಜೈ ಡಿಸ್ಪೆನ್ಸರಿಗೆ ಕಳುಹಿಸಲು ತಿಳಿಸಿದ್ದೇನೆ. ಬೆಂಗಳೂರಿನಿಂದ ಮಂಜೂರಾಗಿ ಬರಲಿದೆ. ಬೇರೆ ಬಿಲ್‌ಗಳ ಪಾವತಿ ವಿಳಂಬಕ್ಕೆ ಸಂಬಂಧಿಸಿ ಬಜೆಟ್ ಇಲ್ಲದೆ ಸಮಸ್ಯೆ ಆಗಿರಬಹುದು. ಬ್ಬಂದಿ ಕೊರತೆಯಿಂದಲೂ ಕೆಲವೊಮ್ಮೆ ವಿಳಂಬವಾಗುತ್ತಿದೆ. ಆದರೆ ಬಿಲ್ ನೀಡಿದವರಿಗೆ ಮಂಜೂರಾಗಿ ಹಣ ಬರುತ್ತದೆ’’
                                                                 - ಡಾ. ಕೃಷ್ಣ , ಅಧೀಕ್ಷಕರು, ಇಎಸ್‌ಐ, ಮಂಗಳೂರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News