ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದ ಉಗ್ರ ಆರ್ಥಿಕ ನೆರವು ನಿಗ್ರಹ ಸಂಸ್ಥೆ

Update: 2019-08-23 14:49 GMT

ಕ್ಯಾನ್‌ಬೆರ (ಆಸ್ಟ್ರೇಲಿಯ), ಆ. 23: ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಮತ್ತು ಕಪ್ಪುಹಣ ಬಿಳುಪು ಮಾಡುವುದರ ಮೇಲೆ ನಿಗಾ ಇಡುವ ಜಾಗತಿಕ ಸಂಸ್ಥೆ ಎಫ್‌ಎಟಿಎಫ್‌ನ ಏಶ್ಯ-ಪೆಸಿಫಿಕ್ ಘಟಕವು ಪಾಕಿಸ್ತಾನವನ್ನು ತೀವ್ರ ನಿಗಾ ಪಟ್ಟಿ (ಕಪ್ಪು ಪಟ್ಟಿ)ಯಲ್ಲಿ ಇರಿಸಿದೆ.

ನಿಗಾ ಸಂಸ್ಥೆಯ ಮಾನದಂಡಗಳನ್ನು ಅನುಸರಿಸಲು ಪಾಕಿಸ್ತಾನ ವಿಫಲವಾಗಿರುವುದಕ್ಕಾಗಿ ಅದರ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) 1989ರಲ್ಲಿ ಜಿ7 ದೇಶಗಳ ಗುಂಪು ಸ್ಥಾಪಿಸಿದ ಅಂತರ್ ಸರಕಾರಿ ಸಂಸ್ಥೆಯಾಗಿದೆ. ಕಪ್ಪುಹಣ ಬಿಳುಪು ಮಾಡುವುದನ್ನು ತಡೆಯಲು ನೀತಿಗಳನ್ನು ರೂಪಿಸುವುದು ಅದರ ಮೂಲ ಉದ್ದೇಶವಾಗಿದ್ದರೂ, 2001ರಲ್ಲಿ ಅದರ ವ್ಯಾಪ್ತಿಯನ್ನು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ನಿಭಾಯಿಸುವುದಕ್ಕೂ ವಿಸ್ತರಿಸಲಾಗಿತ್ತು.

 ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಮತ್ತು ಕಪ್ಪುಹಣ ಬಿಳುಪುಗೆ ಸಂಬಂಧಿಸಿದ 40 ಮಾನದಂಡಗಳ ಪೈಕಿ 32ನ್ನು ಪಾಕಿಸ್ತಾನ ಅನುಸರಿಸಿಲ್ಲ ಎನ್ನುವುದನ್ನು ಏಶ್ಯ ಪೆಸಿಫಿಕ್ ಘಟಕ ಪತ್ತೆಹಚ್ಚಿದೆ.

ಆಸ್ಟ್ರೇಲಿಯದ ರಾಜಧಾನಿ ಕ್ಯಾನ್‌ಬೆರದಲ್ಲಿ ನಡೆದ ಎಫ್‌ಎಟಿಎಫ್‌ನ ಏಶ್ಯ ಪೆಸಿಫಿಕ್ ಗುಂಪಿನ ಸಭೆಯು ಎರಡು ದಿನಗಳ ಅವಧಿಯಲ್ಲಿ ಏಳು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು.

ಇದಕ್ಕೂ ಮೊದಲು, ಜೂನ್‌ನಲ್ಲಿ ನಡೆದ ಪೂರ್ಣಾಧಿವೇಶನದಲ್ಲಿ, ಭಯೋತ್ಪಾದನೆಗೆ ಲಭಿಸುವ ಆರ್ಥಿಕ ನೆರವಿನ ನಿಯಂತ್ರಣಕ್ಕಾಗಿ ನಿಗದಿಪಡಿಸಲಾಗಿರುವ ಗುರಿಗಳನ್ನು ಪೂರೈಸಲು ಪಾಕಿಸ್ತಾನ ವಿಫಲವಾದರೆ ಅದನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಫ್‌ಎಟಿಎಫ್ ಎಚ್ಚರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News