ಮ್ಯಾನ್ಮಾರ್ ಸೈನಿಕರ ಲೈಂಗಿಕ ಹಿಂಸಾಚಾರವು ‘ಜನಾಂಗೀಯ ಹತ್ಯೆ’ಯ ಸೂಚನೆಯಾಗಿತ್ತು: ವಿಶ್ವಸಂಸ್ಥೆ ವರದಿ

Update: 2019-08-23 18:38 GMT

ವಿಶ್ವಸಂಸ್ಥೆ, ಆ. 23: 2017ರಲ್ಲಿ ಮ್ಯಾನ್ಮಾರ್ ಸೇನೆಯು ರೊಹಿಂಗ್ಯಾ ಮಹಿಳೆಯರು ಮತ್ತು ಬಾಲಕಿಯರ ಮೇಲೆ ನಡೆಸಿದ ಲೈಂಗಿಕ ಹಿಂಸಾಚಾರವು, ದೇಶದ ಪ್ರಮುಖ ಮುಸ್ಲಿಮ್ ಅಲ್ಪಸಂಖ್ಯಾತ ಜನಾಂಗವನ್ನು ನಾಶಪಡಿಸುವ ಸೇನೆಯ ಜನಾಂಗೀಯ ಹತ್ಯೆಯ ಉದ್ದೇಶವನ್ನು ಹೊಂದಿತ್ತು ಗುರುವಾರ ಪ್ರಕಟಗೊಂಡ ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಜನಾಂಗೀಯ ಹತ್ಯೆಯ ಹೊಣೆಯನ್ನು ನಿಗದಿಪಡಿಸುವಲ್ಲಿ ಮ್ಯಾನ್ಮಾರ್ ಸರಕಾರ ವಿಫಲವಾಗಿದೆ ಎಂದು ಸ್ವತಂತ್ರ ತನಿಖಾಧಿಕಾರಿಗಳ ಸಮಿತಿಯೊಂದು ಸಿದ್ಧಪಡಿಸಿದ ವರದಿ ಹೇಳಿದೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯು 2017ರಲ್ಲಿ ತನಿಖಾ ಸಮಿತಿಯನ್ನು ರಚಿಸಿತ್ತು.

 ಜನಾಂಗೀಯ ಹತ್ಯೆಯ ಕೃತ್ಯಗಳನ್ನು ನಡೆಸಿದವರನ್ನು ತನಿಖೆಗೊಳಪಡಿಸಿ ಶಿಕ್ಷಿಸುವ ತನ್ನ ಹೊಣೆಯನ್ನು ನಿಭಾಯಿಸುವಲ್ಲಿ ಮ್ಯಾನ್ಮಾರ್ ಸರಕಾರ ವಿಫಲವಾಗಿರುವುದರಿಂದ, ‘ಜನಾಂಗೀಯ ಹತ್ಯೆ ಸನ್ನದಿ’ನಂತೆ ಮ್ಯಾನ್ಮಾರ್ ಸರಕಾರವೇ ಇದಕ್ಕೆ ಹೊಣೆಯಾಗುತ್ತದೆ ಎಂದು ವರದಿ ಹೇಳಿದೆ.

2017ರ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸೇನಾ ದಮನ ಕಾರ್ಯಾಚರಣೆ ಆರಂಭಗೊಂಡ ಬಳಿಕ ಸುಮಾರು 7.40 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

‘‘ನೂರಾರು ರೊಹಿಂಗ್ಯಾ ಮಹಿಳೆಯರು ಮತ್ತು ಬಾಲಕಿಯರನ್ನು ಅತ್ಯಾಚಾರಗೈಯಲಾಗಿದೆ. ಈ ಪೈಕಿ 80 ಶೇಕಡದಷ್ಟು ಅತ್ಯಾಚಾರಗಳು ಸಾಮೂಹಿಕ ಅತ್ಯಾಚಾರಗಳಾಗಿದ್ದವು ಎಂಬುದನ್ನು ತನಿಖಾ ತಂಡ ನಿರ್ಧರಿಸಿದೆ. ಈ ಸಾಮೂಹಿಕ ಅತ್ಯಾಚಾರಗಳ ಪೈಕಿ 82 ಶೇಕಡದಷ್ಟನ್ನು ಮ್ಯಾನ್ಮಾರ್ ಸೇನೆ ನಡೆಸಿದೆ’’ ಎಂದು ವರದಿ ತಿಳಿಸಿದೆ.

 ಮ್ಯನ್ಮಾರ್‌ಗೆ ಭೇಟಿ ನೀಡಲು ವಿಶ್ವಸಂಸ್ಥೆಯ ತನಿಖಾಧಿಕಾರಿಗಳಿಗೆ ಮ್ಯಾನ್ಮಾರ್ ಸರಕಾರ ಅನುಮತಿ ನಿರಾಕರಿಸಿತ್ತು. ತನಿಖಾಧಿಕಾರಿಗಳು ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಮಲೇಶ್ಯಗಳಲ್ಲಿರುವ ನಿರಾಶ್ರಿತ ಶಿಬಿರಗಳಿಗೆ ಪ್ರಯಾಣಿಸಿ ನೆರವು ಗುಂಪುಗಳು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಅಂತರ್‌ಸರಕಾರಿ ಸಂಘಟನೆಗಳ ಸದಸ್ಯರನ್ನು ಭೇಟಿ ಮಾಡಿದ್ದರು.

ಜನಾಂಗೀಯ ಹತ್ಯೆ ಇಂಗಿತದ 6 ಸೂಚನೆಗಳು

ಮ್ಯಾನ್ಮಾರ್ ಸೇನೆಯ ಜನಾಂಗೀಯ ಹತ್ಯೆ ಇಂಗಿತದ ಐದು ಸೂಚನೆಗಳನ್ನು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಆಗಸ್ಟ್ 2018ರ ವರದಿಯಲ್ಲಿ ಪಟ್ಟಿ ಮಾಡಿದ್ದಾರೆ. ಅವುಗಳೆಂದರೆ ಅವಹೇಳನಕಾರಿ ಭಾಷೆಯ ಬಳಕೆ; ಹಿಂಸೆಗೆ ಮುನ್ನ, ಹಿಂಸೆಯ ಅವಧಿಯಲ್ಲಿ ಮತ್ತು ನಂತರ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ಧಾರ್ಮಿಕ ನಾಯಕರು ಮತ್ತು ಸೇನಾಧಿಕಾರಿಗಳು ನೀಡುವ ನಿರ್ದಿಷ್ಟ ಹೇಳಿಕೆಗಳು; ತಾರತಮ್ಯಕಾರಿ ಯೋಜನೆಗಳು ಮತ್ತು ನೀತಿಗಳನ್ನು ಜಾರಿಗೆ ತರುವುದು; ವಿನಾಶಕ್ಕೆ ಸಂಘಟಿತ ಯೋಜನೆ ರೂಪಿಸುವುದು ಮತ್ತು ಅತ್ಯಂತ ಅಮಾನುಷ ಸೇನಾ ದಮನ ಕಾರ್ಯಾಚರಣೆ.

ಮಹಿಳೆಯರು ಮತ್ತು ಬಾಲಕಿಯರ ವಿರುದ್ಧ ನಡೆದ ಲೈಂಗಿಕ ಹಿಂಸಾಚಾರವು ಸೇನೆಯ ಜನಾಂಗೀಯ ಹತ್ಯೆಯ ಇಂಗಿತದ ಆರನೇ ಸೂಚನೆಯಾಗಿದೆ ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆ ಎಂದು ನೂತನ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News