ಆಹಾರ ಪೂರೈಕೆ ಮಾಡುವ ದ್ವಿಚಕ್ರ ಸವಾರರ ಅಮಿತ ವೇಗಕ್ಕೆ ಕಡಿವಾಣ: ಕಮಿಷನರ್ ಹರ್ಷ

Update: 2019-08-23 16:17 GMT

ಮಂಗಳೂರು, ಆ.23: ಆನ್‌ಲೈನ್ ಮೂಲಕ ಆರ್ಡರ್ ಪಡೆದು ಹೊಟೇಲ್‌ಗಳಿಂದ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುವ ದ್ವಿಚಕ್ರ ಸವಾರರು ನಗರದಲ್ಲಿ ಅಮಿತ ವೇಗದಿಂದ ಸಂಚರಿಸುವುದನ್ನು ತಡೆಯಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಭರವಸೆ ನೀಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಅವರು ಅತಿ ವೇಗದ ಸಂಚಾರದ ಬಗ್ಗೆ ಪರಿಶೀಲನೆ ನಡೆಸಲು ಎಸಿಪಿ ಮಂಜುನಾಥ ಶೆಟ್ಟಿ ಸೂಚಿಸಿದರಲ್ಲದೆ, ಅಮಿತ ವೇಗಕ್ಕೆ ಕಡಿವಾಣ ಹಾಕಲಾಗುವುದು ಎಂದರು.

ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ವಶಪಡಿಸಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳ ಮುಂದೆ ನಿಲ್ಲಿಸಲಾಗಿದೆ. ಇದನ್ನು ಶುಚಿತ್ವ ಮತ್ತು ಸೌಂದರ್ಯದ ದೃಷ್ಟಿಯಿಂದ ಸಕಾಲಕ್ಕೆ ವಿಲೇವಾರಿ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಕೋಡಿಕಲ್‌ಗೆ ಕಂಕನಾಡಿಯಿಂದ ಬರುವ ಬಸ್ ದಿನಂಪ್ರತಿ ಮಧ್ಯಾಹ್ನ 3 ಟ್ರಿಪ್ ಕಟ್ ಮಾಡುತ್ತಿವೆ. ಸ್ಟೇಟ್‌ಬ್ಯಾಂಕ್‌ನಿಂದ 13 ಹಾಗೂ 19 ನಂಬರ್ ಬಸ್‌ಗಳು ಟ್ರಿಪ್ ಕಟ್ ಮಾಡುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿವೆ ಎಂಬ ದೂರು ಕೇಳಿ ಬಂತು. ಈ ಬಗ್ಗೆ ಆರ್‌ಟಿಒ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.

ಕೆಲವು ಸಂಚಾರ ಪೊಲೀಸರ ಮೇಲೆ ಭ್ರಷ್ಟಾಚಾರ ಆರೋಪವಿದೆ. ಇದಕ್ಕಾಗಿ ಕೆಎಸ್ಸಾರ್ಟಿಸಿ ನಿರ್ವಾಹಕರ ಮಾದರಿಯಲ್ಲಿ ಡ್ಯೂಟಿಗೆ ಹಾಜರಾಗುವಾಗ ಮತ್ತು ಹೊರಡುವಾಗ ತಪಾಸಣೆ ನಡೆಸಬೇಕು ಎಂದು ಸಾರ್ವಜನಿಕರೊಬ್ಬರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ನಿಗದಿತ ಪ್ರಕರಣವಿದ್ದರೆ ನೇರವಾಗಿ ಗಮನಕ್ಕೆ ತನ್ನಿ ಅಥವಾ ಎಸಿಬಿ ಅಧಿಕಾರಿಗಳಿಗೆ ದೂರು ನೀಡಲು ಅವಕಾಶವಿದೆ ಎಂದು ಸಲಹೆ ನೀಡಿದರು.

ಕಟ್ಟಡ ನಿರ್ಮಾಣ ಸಂದರ್ಭ ದಿನವಿಡೀ ಸಿಮೆಂಟ್ ಮಿಕ್ಸರ್ ಲಾರಿಗಳು ರಸ್ತೆಯಲ್ಲೇ ನಿಲ್ಲುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗು ತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವ್ಯಕ್ತಿಯೊಬ್ಬರು ಒತ್ತಾಯಿಸಿದರು. ಶಕ್ತಿನಗರದಲ್ಲಿ ಆಟೋ ಚಾಲಕರು ಹಗಲು ಹೊತ್ತು ಒಂದೂವರೆಪಟ್ಟು ಬಾಡಿಗೆ ವಸೂಲು ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದರು. ಈ ಬಗ್ಗೆ ಆಟೋ ರಿಕ್ಷಾದ ಮಾಹಿತಿ ಪಡೆದ ಆಯುಕ್ತರು ಪತ್ತೆ ಮಾಡಿ ವಿಚಾರಣೆ ನಡೆಸುವಂತೆ ಎಸಿಪಿ ಮಂಜುನಾಥ ಶೆಟ್ಟಿಗೆ ಸೂಚಿಸಿದರು.

ನಗರದಲ್ಲಿ ಹಲವು ಕಡೆ ನೋ ಪಾರ್ಕಿಂಗ್ ನಾಮಫಲಕ ಇಲ್ಲ. ಗೊತ್ತಾಗದೆ ವಾಹನ ನಿಲ್ಲಿಸಿದರೆ ಟ್ರೋಲ್ ಮಾಡಿಕೊಂಡು ಹೋಗುತ್ತಾರೆ. ಆದ್ದರಿಂದ ನೋ ಪಾರ್ಕಿಂಗ್ ನಾಮಫಲಕ ಅಳವಡಿಸಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.

ಡಿಸಿಪಿಗಳಾದ ಅರುಣಾಂಗ್‌ಶಿ ಗಿರಿ, ಲಕ್ಷ್ಮಿಗಣೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News