ಮಂಗಳೂರು: ಶ್ರೀ ಕೃಷ್ಣ ಜಯಂತಿ ಆಚರಣೆ

Update: 2019-08-23 16:21 GMT

ಮಂಗಳೂರು, ಆ.23 : ದ.ಕ.ಲ್ಲಾಡಳಿತ, ದ.ಕ.ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಕರ್ಮ, ಜ್ಞಾನ ತತ್ವದಡಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜಕ್ಕೆ ಬೆಳಕಾಗಬೇಕು ಎಂಬುದು ಶ್ರೀಕೃಷ್ಣನ ಸಂದೇಶದ ಸಾರವಾಗಿದೆ. ಈ ಸಂದೇಶ ನಮಗೆ ಪ್ರೇರಣೆಯಾದಾಗ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಶ್ರೀಕೃಷ್ಣನ ಬಾಲ್ಯದಿಂದ ಕೊನೆಯವರೆಗಿನ ಜೀವನದ ಎಲ್ಲಾ ಸ್ತರಗಳನ್ನು ಅವಲೋಕಿಸಿದರೆ ಪ್ರತಿಯೊಂದು ಹಂತದಲ್ಲೂ ನೀಡಿದ ಸಂದೇಶಗಳು ವಿಶ್ವಮಾನ್ಯವಾದುದು ಎಂದು ಕಲ್ಕೂರಾ ಅಭಿಪ್ರಾಯಪಟ್ಟರು.

ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಶ ಕುಮಾರ ಎಂ.ಕೆ. ಸಂದೇಶ ನೀಡಿ ಶ್ರೀ ಕೃಷ್ಣ ಬಲಕಾರ್ಯ ಮತ್ತು ಜ್ಞಾನಕಾರ್ಯದ ಮೂಲಕ ತನ್ನ ಅವತಾರವನ್ನು ಪೂರ್ಣಗೊಳಿಸಿದರು. ಬಾಲ್ಯದಿಂದ ಹಿಡಿದು ಕೊನೆಯವರೆಗೆ ದುಷ್ಟ, ಸಮಾಜಘಾತುಕ ಶಕ್ತಿಗಳನ್ನು ಶಿಕ್ಷಿಸುವ ಕಾರ್ಯ ಮಾಡಿದರು. ಇನ್ನೊಂದೆಡೆ ಜ್ಞಾನೋಪದೇಶದ ಮೂಲಕ ಸಮಾಜವನ್ನು ಉದ್ದರಿಸಿದರು. ಭಗವದ್ಗೀತೆ ಧರ್ಮಗ್ರಂಥ ಮಾತ್ರವಲ್ಲ, ಅದೊಂದು ಬದುಕಿನ ದಾರಿಯಾಗಿದೆ ಎಂದರು.

ಮಂಗಳೂರು ತಾಪಂಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ (ಯಾದವ) ಸಮಾಜಸೇವಾ ಸಂಘದ ಅಧ್ಯಕ್ಷ ಟಿ.ಆರ್. ಕುಮಾರ ಸ್ವಾಮಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಮಧುಸೂದನ ಆಯಾರ್ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News