ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಕ್ರಮಕ್ಕೆ ದ.ಕ. ಜಿಲ್ಲಾ ಎಸ್ಸೆಸ್ಸೆಫ್ ನಾಯಕರ ಒತ್ತಾಯ

Update: 2019-08-23 17:10 GMT

ಬೆಳ್ತಂಗಡಿ :  ಗೋವಿಂದೂರು ಎಂಬಲ್ಲಿಂದ ಪಾಕಿಸ್ತಾನಕ್ಕೆ ಸ್ಯಾಟ್ ಲೈಟ್ ಕರೆ ಎಂಬ ವಿಚಾರದಲ್ಲಿ ಗೋವಿಂದೂರು ನಿವಾಸಿ ಪ್ರಸ್ತು ಮಂಗಳೂರಿನ ಮಂಜನಾಡಿಯಲ್ಲಿರುವ ಸಂಸ್ಥೆಯ ಸಿಬ್ಬಂದಿ ರವೂಫ್ ಎಂಬವರನ್ನು ಸುಳ್ಳು ಸುದ್ದಿ  ಬಿತ್ತರಿಸಿ ಭಯೋತ್ಪಾದಕನನ್ನಾಗಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್ಸೆಸ್ಸೆಫ್ ಜಿಲ್ಲಾ ನಾಯಕ ಎಂ. ಶರೀಫ್ ಬೆರ್ಕಳ ಒತ್ತಾಯಿಸಿದ್ದಾರೆ.

ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರವೂಫ್ ಎಂಬ ಅಮಾಯಕ ಯುವಕನನ್ನು ರಾಷ್ಟ್ರೀಯ ತನಿಖಾ ದಳ ಎನ್‍ಐಎ ತೀವ್ರ ವಿಚಾರಣೆಗೆ ಒಳಪಡಿಸಿ, ಬಂಧಿಸಿದೆ ಎಂಬುದಾಗಿ ಕೆಲವು ಸಾಮಾಜಿಕ ಜಾಲತಾಣಗಳು, ಕೆಲವೊಂದು ಮಾಧ್ಯಮಗಳು ತಪ್ಪು ಪ್ರಸಾರ ನೀಡುತ್ತಿವೆ. ಇದರಿಂದ ಅವರ ಕುಟುಂಬ ಮತ್ತು ಸಮಾಜವು ತಪ್ಪು ಕಲ್ಪನೆಗಳು ರವಾನೆಯಾಗಿದ್ದರಿಂದ ಅವರು ತೊಂದರೆಗೆ ಒಳಗಾಗಿದ್ದಾರೆ. ಎಲ್ಲ ಧರ್ಮಗಳವರು  ಶಾಂತಿ ಸೌಹಾರ್ದತೆಯಿಂದ  ಜೀವಿಸುತ್ತಿರುವ ಈ ಜಿಲ್ಲೆಯಲ್ಲಿ ಸಮಾಜದ ಸ್ವಾಸ್ಥ್ಯ ಹಾಳುಗೆಡವಲು ಕೆಲವು ಸ್ಥಾಪಿತ ಹಿತಾಶಕ್ತಿಗಳು ಈ ಷಡ್ಯಂತ್ರ ರೂಪಿಸಿದ್ದು, ಮುಸ್ಲಿಂ ಸಮಾಜವನ್ನು ಗುರಿಯಾಗಿಸಿ ಕೆಲವು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ಈ ನೀಚ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದರು.

ಸಂಬಂಧಪಟ್ಟ ಇಲಾಖೆಯ ಮೂಲಕ ಈ ಸುದ್ದಿಯ ಮೂಲವನ್ನು ಹುಡುಕಿ, ಸುದ್ದಿ ಹಬ್ಬಿದ ಮಾಧ್ಯಮಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲರಲ್ಲಿ ವಿನಂತಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ದ.ಕ ಸದಸ್ಯ ಇಕ್ಬಾಲ್ ಮಾಚಾರ್, ಬೆಳ್ತಂಗಡಿ ಡಿವಿಜನ್ ಅಧ್ಯಕ್ಷ ಅಯ್ಯೂಬ್ ಮಹ್ಳರಿ ಕಾವಳ್‍ಕಟ್ಟೆ, ಪ್ರಧಾನ ಕಾರ್ಯದರ್ಶಿ ಶರೀಫ್ ನಾವೂರು, ಕೋಶಾಧಿಕಾರಿ ನಝೀರ್ ಮದನಿ ಪುಂಜಾಲಕಟ್ಟೆ, ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಗೂ ಮುನ್ನ ನಿಯೋಗ ತಹಶೀಲ್ದಾರರ ಮೂಲಕ ಸರಕಾರಕ್ಕೆ ದೂರು ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News