ಬೆಳ್ತಂಗಡಿ: ಭೂಕುಸಿತದ ಭೀತಿ; ಸ್ಥಳಾಂತರಗೊಳ್ಳಲು ಸೂಚನೆ

Update: 2019-08-23 17:18 GMT

ಬೆಳ್ತಂಗಡಿ:  ತಾಲೂಕಿನಲ್ಲಿ ಪ್ರವಾಹದಿಂದಾಗಿ ಎಲ್ಲವನ್ನೂ ಕಳೆದುಕೊಂಡವರು ನೋವು, ಸಂಕಷ್ಟ ಒಂದೆಡೆಯಾದರೆ ಮತ್ತೊಂದೆಡೆ ಭೂಕುಸಿತದ ಭೀತಿಯಿಂದಾಗಿ ತಮ್ಮ ಮನೆಯಲ್ಲಿ ಇನ್ನೂ ನೆಮ್ಮದಿಯಿಂದ ನಿದ್ದೆ ಮಾಡಲಾಗದವರ ನೋವು ಇನ್ನೊಂದೆಡೆಯಾಗಿದೆ.

ಕಾಜೂರು ಸಮೀಪ ಗಣೇಶನಗರದಲ್ಲಿರುವ ಸುಮಾರು ಒಂಬತ್ತು ಮನೆಯವರಿಗೆ ಇದೀಗ ರಾತ್ರಿಯಾದರೆ ನಿದ್ದಯೇ ಇಲ್ಲ ಇವರ ಮನೆಯ ಮೇಲ್ಭಾಗದಲ್ಲಿ ಭೂಮಿ ದೊಡ್ಡಪ್ರಮಾಣದಲ್ಲಿ ಬಿರುಕು ಬಿಟ್ಟಿದು ಜಿಲ್ಲಾಡಳಿತ ಇವರಿಗೆ ಇಲ್ಲಿಂದ ಸ್ಥಳಾಂತರಗೊಳ್ಳುವಂತೆ ಸೂಚಿಸಿದೆ. ಆದರೆ ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ಇವರಿಗೆ ಇನ್ನೂ ಕಲ್ಪನೆಯೇ ಇಲ್ಲವಾಗಿದೆ.

ವಾರದ ಹಿಂದೆ ನಡೆದ ಭೀಕರ ಮಳೆ ಹಾಗೂ ಭೂಕುಸಿತದ ಪ್ರಭಾವ ಗಣೇಶ ನಗರದಲ್ಲಿಯೂ ಆಗಿತ್ತು ಗುಡ್ಡದ ಒಂದು ಭಾಗ ಕುಸಿದು ಬಿದ್ದಿದ್ದು ಕೆಲ ಮನೆಗಳಿಗೆ ಹಾನಿಯೂ ಆಗಿತ್ತು. ಆದರೆ ಹೆಚ್ಚಿನ ಹಾನಿಗಳಾಗಿರಲಿಲ್ಲ. ಆದರೆ ಇದೀಗ ಇವರು ವಾಸಿಸುವ ಪ್ರದೇಶದ ಮೇಲ್ಭಾಗದಲ್ಲಿ ಭೂಮಿ ಸುಮಾರು ಹತ್ತಕ್ಕೂ ಅಧಿಕ ಕಡೆಗಳಲ್ಲಿ ದೊಡ್ಡದಾಗಿ ಬಿರುಕು ಬಿಟ್ಟಿದ್ದು  ಕುಸಿದು ಬೀಳುವ ಸ್ಥಿತಿಯಲ್ಲಿದೆ. ದೊಡ್ಡ ಬಂಡೆಗಳೂ ಜಾರುವಂತೆ ಕಾಣುತ್ತಿದ್ದು ಕೆಳಗಿನ ಮನೆಗಳಲ್ಲಿ ವಾಸಿಸುವುದು ಅತ್ಯಂತ ಅಪಾಯಕಾರಿಯಾಗಿದೆ.

ಸ್ಥಳೀಯ ನಿವಾಸಿಗಳಾದ ಕೃಷ್ಣಪ್ಪ ಗೌಡ, ವೆಂಕಪ್ಪಗೌಡ, ಸಿದ್ದಿ ಬ್ಯಾರಿ, ಗೋಪಾಲಕೃಷ್ಣಗೌಡ, ಲೋಕಯ್ಯಗೌಡ, ಇಸುಬು ಬ್ಯಾರಿ, ಜಿನ್ನಪ್ಪ ಮೂಲ್ಯ, ಕೃಷ್ಣಪ್ಪ, ಬಾಲಕ್ಕ ಅವರ ಕುಟುಂಬಗಳು ಇದೀಗ ಅಪಾಯದ ಸ್ಥಿತಿಯಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಈ ಎಲ್ಲ ಕುಟುಂಬಗಳೂ ಒಂದೆಕ್ರಗಿಂತ ಕಡಿಮೆ ಜಮೀನು ಹೊಂದಿದವರಾಗಿದ್ದು ಕೃಷಿ ಕೂಲಿಕೆಲಸ ಮಾಡಿ ಬದುಕನ್ನು ನಡೆಸುತ್ತಿದ್ದಾರೆ. ಇದೀಗ ಏಕಾ ಏಕಿ ಮನೆ ಬಿಟ್ಟು ಬರಬೇಕೆಂದರೆ ಏನು ಮಾಡಕೆಂದು ತಿಳಿಯದಾಗಿದ್ದಾರೆ ಇವರು.

ಈಗಾಗಲೆ ಜಿಲ್ಲಾಧಿಕಾರಿಯವರು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಇಲ್ಲಿ ವಾಸಿಸುವುದು ಕ್ಷೇಮವಲ್ಲ ಆದುದರಿಂದ ಇಲ್ಲಿಂದ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಕಂದಾಯ ಇಲಾಖೆಯವರು ಬಾಡಿಗೆ ಮನೆ ನೋಡಿ ಸರಕಾರ ಬಾಡಿಗೆ ನೀಡುತ್ತದೆ ಎಂದು ಹೇಳುತ್ತಿದ್ದಾರೆ, ಆದರೆ ಬಾಡಿಗೆ ಮನೆಯಲ್ಲಿ ಎಷ್ಟು ದಿನ ಬದುಕುವುದು ಎಂಬುದು ಇವರ ಪ್ರಶ್ನೆಯಾಗಿದೆ.

ಭೂ ವಿಜ್ಞಾನಿಗಳ ಭೇಟಿ: ದೊಡ್ಡ ಪ್ರಮಾಣದಲ್ಲಿ ಭೂಮಿ ಬಿರುಕು ಬಿಟ್ಟಿರುವ ಈ ಪ್ರದೇಶಗಳಿಗೆ ಬೆಂಗಳೂರಿನಿಂದ ಭೂ ವಿಜ್ಞಾನಿಗಳ ತಂಡ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಜನವಸತಿ ಪ್ರದೇಶದಿಂದ ಸುಮಾರು ನಾಲ್ಕು ಕಿ.ಮೀ ಎತ್ತರದಲ್ಲಿ ಬೆಟ್ಟದ ಮೇಲೆ ಭೂಮಿ ವಿವಿಧೆಡೆ ಬಿರುಕು ಬಿಟ್ಟಿದೆ, ಬಂಡೆಗಳು ಜಾರುವ ಸ್ಥಿತಿಯಲ್ಲಿರುವುದನ್ನು ಪರಿಶೀಲಿಸಿದ ಅಧಿಕಾರಿಗಳು ಇಲ್ಲಿ ಭೂ ಕುಸಿತದ ಸಾಧ್ಯತೆ ಅತ್ಯಂತ ಹೆಚ್ಚಾಗಿದ್ದು ಜೋರಾಗಿನ ಮಳೆ ಸುರಿದರೆ ಕುಸಿತವಾಗಲಿದ್ದು ಇಲ್ಲಿ ಜನವಾಸಕ್ಕೆ ಯೋಗ್ಯವಲ್ಲ ಎಂದು ಎಚ್ಚರಿಸಿದ್ದಾರೆ.

ತಾಲೂಕಿನಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತವಾಗಿರುವ ಪ್ರದೇಶಗಳಿಗೆ ಹಾಗೂ ಬಿರುಕು ಬಿಟ್ಟಿರುವ ಪ್ರದೇಶಗಳಿಗೆ ಭೂ ವಿಜ್ಞಾನಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ವಿಜ್ಞಾನಿಗಳ ತಂಡ ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ.

ನಾವು ಇರುವ ಜಾಗದಲ್ಲಿ ಸಾಲ ಮಾಡಿ ಮನೆ ಕಟ್ಟಿ  ನೆಮ್ಮದಿಯಿಂದ ಇದ್ದೇವು. ಇದೀಗ ಈ ಭೂ ಕುಸಿತ ನಮ್ಮ ಬದುಕನ್ನು ಕಸಿದುಕೊಂಡಿದೆ. ಇಲ್ಲಿ ವಾಸಿಸಬಾರದು ಎಂದು ಹೇಳುತ್ತಿದ್ದಾರೆ. ಆದರೆ ಎಲ್ಲಿಗೆ ಹೋಗಬೇಕು ಎಂದು ನಮಗೆ ಗೊತ್ತಿಲ್ಲ. ಮನೆಯ ಸಾಲ ಇನ್ನೂ ತೀರಿಸಿ ಆಗಿಲ್ಲ, ಬಾಡಿಗೆ ಕೊಡುತ್ತೇವೆ ಎನ್ನುತ್ತಿದ್ದಾರೆ ಅದು ಎಷ್ಟು ದಿನ ಸಾಧ್ಯ, ನಮಗೆ ಸರಿಯಾದ ಜಾಗ ಗುರುತಿಸಿ ಮನೆ ಕಟ್ಟಿ ಕೊಡಲಿ ಅದರ ಹೊರತಾಗಿ ನಾವು ಇಲ್ಲಿಂದ ಹೊರ ಹೋಗಲು ಸಾಧ್ಯವಿಲ್ಲ. 

ರಾಮಕ್ಕ, ಸ್ಥಳೀಯ ನಿವಾಸಿ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News