ನಿವೃತ್ತ ನೌಕರರ ಪಿಂಚಣಿ ಸಮಸ್ಯೆಗಳಿಗೆ ಸ್ಪಂದಿಸಿ: ಡಿಸಿ ಸಸಿಕಾಂತ್ ಸೆಂಥಿಲ್

Update: 2019-08-23 17:25 GMT

ಮಂಗಳೂರು, ಆ.23: ನಿವೃತ್ತ ಸರಕಾರಿ ನೌಕರರು ಜೀವನ ನಿರ್ವಹಣೆಗಾಗಿ ಪಿಂಚಣಿಯನ್ನು ಅವಲಂಬಿಸಿರುತ್ತಾರೆ. ಹಾಗಾಗಿ ಪಿಂಚಣಿಯನ್ನು ಸಕಾಲದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಮಂಜೂರಾತಿ ಮಾಡಬೇಕು ಎಂದು ಪಿಂಚಣಿ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದರು.

ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಡಳಿತ ಹಾಗೂ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಜಿಲ್ಲಾ ಮಟ್ಟದ ಪಿಂಚಣಿ ಅದಾಲತ್ ಸಭೆಯಲ್ಲಿ ಅವರು ಮಾತನಾಡಿದರು.

ನಿವೃತ್ತ ಸರಕಾರಿ ನೌಕರರಿಗೆ ಪಿಂಚಣಿ ಸಕಾಲದಲ್ಲಿ ಸಿಗುವಂತೆ ಹಾಗೂ ಹಳೆಯ ವೇತನ ಶ್ರೇಣಿಯನ್ನು ಕೈ ಬಿಟ್ಟು ಹೊಸ ವೇತನ ಶ್ರೇಣಿಯ ಪ್ರಕಾರ ಪಿಂಚಣಿ ದೊರಕುವಂತಾಗಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಡಿಸಿ ಆದೇಶಿಸಿದರು.

ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಎರಡು ವಾರದೊಳಗಾಗಿ ಪಿಂಚಣಿಯ ಕುರಿತು ಸರಿಯಾದ ಮಾಹಿತಿಯನ್ನು ಒಳಗೊಂಡ ಒಂದು ಸುತ್ತಿನ ಕಾರ್ಯಗಾರ ನಡೆಸಿ, ನೀತಿ ನಿಯಮಗಳ ಬಗ್ಗೆ ಅರಿವು ಮೂಡಿಸುವಂತೆ ಎಂದು ಲೀಡ್ ಬ್ಯಾಂಕ್ ಅಧಿಕಾರಿಗೆ ಆದೇಶ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿವೃತ್ತ ನೌಕರರಿಗೆ ಸಂಬಂಧಿಸಿದ ಪಿಂಚಣಿ ಕಡತಗಳನ್ನು ಸಮರ್ಪಕವಾಗಿ ಕಳುಹಿಸಿಕೊಡುತ್ತಿಲ್ಲ ಎಂಬ ದೂರುಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಇನ್ನು ಮುಂದೆ ಎಚ್ಚರ ವಹಿಸಿ ಪಿಂಚಣಿ ಪಾವತಿ ಆದೇಶಗಳನ್ನು ಚೆಕ್‌ಲಿಸ್ಟ್ ಅನುಸಾರವಾಗಿ ಕಡತಗಳನ್ನು ಕಳುಹಿಸಿಕೊಡಬೇಕು ಎಂದು ಸಸಿಕಾಂತ್ ಸೆಂಥಿಲ್ ನುಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕಿ ಬೇಬಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News