ಪೂರ್ವಾಗ್ರಹಪೀಡಿತ ವರದಿ: ಪತ್ರಕರ್ತನ ಬಂಧನಕ್ಕೆ ಇಮಾಮ್ಸ್ ಕೌನ್ಸಿಲ್ ಆಗ್ರಹ

Update: 2019-08-23 17:30 GMT

ಮಂಗಳೂರು, ಆ.23: ಅಮಾಯಕ ರವೂಫ್ ಮುಸ್ಲಿಯಾರ್‌ರನ್ನು ಭಯೋತ್ಪಾದಕನಾಗಿ ಚಿತ್ರೀಕರಿಸಿದ ಪೂರ್ವಾಗ್ರಹಪೀಡಿತ ಮನೋಸ್ಥಿತಿಯ ಪತ್ರಕರ್ತನನ್ನು ಕೂಡಲೇ ಬಂಧಿಸಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ನ ದ.ಕ. ಜಿಲ್ಲಾ ಕಾರ್ಯದರ್ಶಿ ಮೌಲಾನಾ ರಫೀಕ್ ದಾರಿಮಿ ಆಗ್ರಹಿಸಿದ್ದಾರೆ.

ಈ ವರದಿಯ ವಿರುದ್ಧ ಈಗಾಗಲೇ ಬಹಳಷ್ಟು ಜನಾಕ್ರೋಶ ವ್ಯಕ್ತವಾಗಿದೆ. ಪತ್ರಕರ್ತನನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾರ ಅನುಮತಿಗಾಗಿ ಕಾಯುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಜೊತೆಗೆ ಪತ್ರಕರ್ತನಿಗೆ ಸುಳ್ಳು ವರದಿ ನೀಡಿದ ಪೊಲೀಸ್ ಅಧಿಕಾರಿ ಯಾರು? ಇದರಲ್ಲಿ ಪೊಲೀಸರ ಪಾತ್ರದ ಬಗ್ಗೆಯೂ ತನಿಖೆ ಆಗಬೇಕು ಎಂದು ರಫೀಕ್ ದಾರಿಮಿ ಒತ್ತಾಯಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಈ ರೀತಿ ಅಮಾಯಕ ಮುಸ್ಲಿಮ್ ಧರ್ಮಗುರುವನ್ನು ಭಯೋತ್ಪಾದಕನಾಗಿ ಮಾಡುವ ಮತ್ತು ಸುಳ್ಳು ವರದಿ ಪ್ರಕಟಿಸಿ ಸಮಾಜದಲ್ಲಿ ಅಶಾಂತಿ ಹರಡುವ ಪ್ರಯತ್ನ ಇದಾಗಿದೆ. ಪೊಲೀಸ್ ದೌರ್ಜನ್ಯದ ಕುರಿತು ನೈಜ ಸುದ್ದಿಯನ್ನು ವರದಿ ಮಾಡಿದ ‘ವಾರ್ತಾಭಾರತಿ’ಯ ವರದಿಗಾರನ ಮೇಲೆ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ ಬಂಧಿಸಲು ಸಾಧ್ಯವಾಗುವುದಾದರೆ, ಕಪೋಲ ಕಲ್ಪಿತ ವರದಿ ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸಿದ ಪತ್ರಕರ್ತನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಯಾಕೆ ಸಿದ್ಧವಿಲ್ಲ ಎಂದು ರಫೀಕ್ ದಾರಿಮಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News