ಮೂರು ದಶಕಗಳಿಂದ ಮೂರು ವೇತನ ಪಡೆಯುತ್ತಿರುವ ಬಿಹಾರಿ ಎಂಜಿನಿಯರ್ !

Update: 2019-08-24 05:21 GMT

ಪಾಟ್ನಾ: ಬಿಹಾರ ಸರ್ಕಾರದ ಸಹಾಯಕ ಎಂಜಿನಿಯರ್ ಒಬ್ಬರು ಕಳೆದ ಮೂರು ದಶಕಗಳಿಂದ ಮೂರು ಭಿನ್ನ ಹುದ್ದೆಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡುತ್ತಾ ಮೂರು ಕಡೆಯೂ ವೇತನ ಪಡೆಯುತ್ತಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ಪ್ರತಿ ಹುದ್ದೆಗಳಲ್ಲಿ ಬಡ್ತಿಯನ್ನೂ ಪಡೆದಿದ್ದಾರೆ. ಆದರೆ ಪಾಟ್ನಾ ಜಿಲ್ಲೆಯ ಬಬೂಲ್ ಗ್ರಾಮದ ನಿವಾಸಿಯಾಗಿರುವ ಸುರೇಶ್‌ರಾಂಗೆ ಅದೃಷ್ಟ ಇತ್ತೀಚೆಗೆ ಕೈಕೊಟ್ಟಿತು. ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆ (ಸಿಎಫ್‌ಎಂಎಸ್) ಈ ಹಗರಣವನ್ನು ಪತ್ತೆ ಮಾಡಿದೆ. ಸರ್ಕಾರ ಆರಂಭಿಸಿರುವ ಈ ಹೊಸ ವಿತ್ತೀಯ ಸಾಧನ ಎಲ್ಲ ಉದ್ಯೋಗಿಗಳ ಆಧಾರ್ ಸಂಖ್ಯೆ, ಜನ್ಮ ದಿನಾಂಕ, ಪಾನ್‌ಕಾರ್ಡ್ ಮತ್ತಿತರ ವಿವರಗಳನ್ನು ದಾಖಲಿಸಿದ ಕಾರಣದಿಂದ ಈ ವಂಚನೆ ಬಹಿರಂಗವಾಗಿದೆ.

ಬಿಹಾರದ ಕಟ್ಟಡ ನಿರ್ಮಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಈತನ ವಿರುದ್ಧ ಸಹೋದ್ಯೋಗಿ ಮಧುಸೂಧನ್ ಕುಮಾರ್ ಕರ್ಣ್ ನಿಡಿದ ದೂರಿನ ಹಿನ್ನೆಲೆಯಲ್ಲಿ ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ ಸುರೇಶ್ ನಿವೃತ್ತರಾಗಬೇಕಿತ್ತು. ಈತನ ಬಂಧನಕ್ಕಾಗಿ ಡಿವೈಎಸ್ಪಿ ಅಖಿಲೇಶ್ ಸಿಂಗ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ಕಿಶನ್‌ಗಂಜ್ ಎಸ್ಪಿ ಕುಮಾರ್ ಆಶೀಶ್ ಹೇಳಿದ್ದಾರೆ.

ಸುರೇಶ್ 1988ರಲ್ಲಿ ರಾಜ್ಯ ರಸ್ತೆ ನಿರ್ಮಾಣ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ನೇಮಕಗೊಂಡಿದ್ದರು. ಬಳಿಕ ಜಲಸಂಪನ್ಮೂಲ ಇಲಾಖೆಗೆ ಆಯ್ಕೆಯಾಗಿದ್ದರು. ಅದೇ ನಗರದಲ್ಲಿ 1989ರ ಜುಲೈ 28ರಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಅದೇ ಇಲಾಖೆಯಲ್ಲಿ ಅದೇ ವರ್ಷ ಮತ್ತೊಂದು ಹುದ್ದೆಗೆ ಆಯ್ಕೆಯಾದ ಸುರೇಶ್‌ನನ್ನು ಭೀಮನಗರ ಪೂರ್ವ ಎಂಬಾಕ್‌ಮೆಂಟ್‌ಗೆ ನಿಯೋಜಿಸಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸುರೇಶ್ ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಹಾಯಕ ಎಂಜಿನಿಯರ್ ಆಗಿ ರಸ್ತೆ ನಿರ್ಮಾಣ ಇಲಾಖೆಯಲ್ಲಿ ಬಡ್ತಿ ಪಡೆದಿದ್ದರು. 2005ರ ಜೂನ್ 17ರಂದು ಜಲಸಂಪನ್ಮೂಲ ಇಲಾಖೆಯಲ್ಲಿ ಬಡ್ತಿ ಪಡೆದಿದ್ದರು. ಸಿಎಫ್‌ಎಂಎಸ್ ಆರಂಭಿಸದಿದ್ದರೆ ಸುರೇಶ್ ಒಂದರ ಮೇಲೊಂದರಂತೆ ಮೂರೂ ಹುದ್ದೆಗಳಿಂದ ಸದ್ಯದಲ್ಲೇ ನಿವೃತ್ತರಾಗುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News