ಉಗ್ರರಿಗೆ ನೆರವು, ಪಾಕ್ ನಂಟು: ಬಂಧಿತ ಬಜರಂಗದಳದ ಮಾಜಿ ಮುಖಂಡ ಈ ಹಿಂದೆಯೂ ಇದೇ ಆರೋಪದಲ್ಲಿ ಬಂಧನವಾಗಿದ್ದ!

Update: 2019-08-24 07:06 GMT

ಭೋಪಾಲ್, ಆ.24: ಪಾಕ್ ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಮಾಜಿ ಬಜರಂಗ ದಳದ ಮುಖಂಡ ಬಲರಾಮ್ ಸಿಂಗ್ ಸಹಿತ ನಾಲ್ವರನ್ನು ಬುಧವಾರ ರಾತ್ರಿ ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಬಂಧಿತ ಬಜರಂಗ ದಳದ ಮುಖಂಡ 2017ರಲ್ಲೂ ಇದೇ ಆರೋಪದಲ್ಲಿ ಬಂಧನವಾಗಿ ಕಳೆದ ವರ್ಷ ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದ.

ಮಧ್ಯಪ್ರದೇಶದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಕಮಲ್‌ ನಾಥ್  ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ. ‘‘ಉಗ್ರರಿಗೆ ಹಣಕಾಸು ನೆರವು ನೀಡುವ ಅಥವಾ ಬೇಹುಗಾರಿಕೆ ಜಾಲ ಹೊಂದಿರುವ, ಮಧ್ಯಪ್ರದೇಶದಲ್ಲಿ ಬೇಹುಗಾರಿಕೆ ನಡೆಸುವ ಯಾರೇ ಆಗಲಿ, ಯಾವುದೇ ರಾಜಕೀಯ ಸಂಘಟನೆಗೆ ಸೇರಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ’’ ಎಂದು ಮಾಜಿ ಬಜರಂಗ ದಳದ ನಾಯಕನ ಬಂಧನವನ್ನು ಉಲ್ಲೇಖಿಸಿ ಕಮಲ್‌ ನಾಥ್  ಹೇಳಿದ್ದಾರೆ.

ಪಾಕಿಸ್ತಾನ ಮಾರ್ಗದರ್ಶನದ ಬೇಹುಗಾರಿಕೆ-ಉಗ್ರರ ಹಣಕಾಸು ನೆರವು ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಬುಧವಾರ ರಾತ್ರಿ ಬಲರಾಮ್ ಸಿಂಗ್ ಹಾಗೂ ಇತರ ಮೂವರನ್ನು ಸಟ್ನಾ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು. ಸಿಂಗ್ ಹಾಗೂ ಆತನ ಸಹಚರರನ್ನು ಆಗಸ್ಟ್ 26ರ ತನಕ ಎಟಿಎಸ್ ತನ್ನ ವಶಕ್ಕೆ ಪಡೆದಿದೆ.

ಪಾಕಿಸ್ತಾನದ ಸಂಚಾಲಕರೊಂದಿಗೆ ಸಂಪರ್ಕ ಹೊಂದಿದ್ದ ಬಂಧಿತ ಆರೋಪಿಗಳು ರಣತಂತ್ರದ ಮಾಹಿತಿಯನ್ನು, ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳುತ್ತಿದ್ದರು. ಸಂಶಯಾಸ್ಪದ ಗಡಿಯಾಚೆಗಿನ ಹಣಕಾಸು ವ್ಯವಹಾರಗಳನ್ನು ಕೈಗೊಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಲರಾಮ್ ಸಿಂಗ್ ಬಜರಂಗದಳದೊಂದಿಗೆ ಸಕ್ರಿಯನಾಗಿದ್ದ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ಸಂಯೋಜಕ ನರೇಂದ್ರ ಸಲುಜಾ ಶುಕ್ರವಾರ ನೀಡಿದ ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದ್ದಾರೆ.

2017ರಲ್ಲಿ ಬಲರಾಮ್ ಹಾಗೂ ಬಿಜೆಪಿ ಕಾರ್ಯಕರ್ತ ಧುೃವ್ ಸಕ್ಸೇನಾರನ್ನು ಪಾಕಿಸ್ತಾನದ ಬೇಹುಗಾರಿಕೆ ಜಾಲಕ್ಕೆ ನೆರವು ನೀಡಿದ ಆರೋಪದಲ್ಲಿ ಮಧ್ಯಪ್ರದೇಶದ ಎಟಿಎಸ್ ಬಂಧಿಸಿತ್ತು. ಆದರೆ, ಧುೃವ್ ಹಾಗೂ ಬಲರಾಮ್ ಸಹಿತ 15ರಲ್ಲಿ 13 ಆರೋಪಿಗಳು ಕಳೆದ ವರ್ಷ ಹೈಕೋರ್ಟ್ ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಬಿಡುಗಡೆಯಾದ ಬಳಿಕ ಹೊಸ ಹುಡುಗರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ ಬಲರಾಮ್ ಬೇಹುಗಾರಿಕೆಗೆ ನೆರವು ಜಾಲವನ್ನು ಸಾಟ್ನಾದಲ್ಲಿ ಮತ್ತೊಮ್ಮೆ ಆರಂಭಿಸಿದ್ದ. ಸಾಟ್ನಾ ಜಿಲ್ಲೆಯಲ್ಲಿ ಬ್ಯಾಂಕ್ ಖಾತೆಗಳಲ್ಲಿ ಹಣ ಜಮೆ ಮಾಡಿದ್ದ. ಪಾಕಿಸ್ತಾನದ ಸಂಚಾಲಕರ ಆಜ್ಞೆಯ ಪ್ರಕಾರ ಬೇಹುಗಾರಿಕೆ ಕಾರ್ಯಾಚರಣೆಗೆ ಹಣವನ್ನು ಇತರ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ  ಪೂರೈಸಲಾಗುತ್ತಿತ್ತು.

ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿ, ಚಿತ್ರಕೂಟ, ದೇವಾಸ್, ಬರ್ವಾನಿ ಹಾಗೂ ಮಂದಸೌರ್ನಲ್ಲಿ ನಡೆದ ಅಪರಾಧ ಘಟನೆಗಳಲ್ಲಿ ಭಾಗಿಯಾಗಿದ್ದ ಹಾಗೂ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುವ ಕಾರ್ಯದಲ್ಲೂ ಭಾಗಿಯಾಗಿದ್ದ ಎಂದು ಕಾಂಗ್ರೆಸ್ನ ಮಾಧ್ಯಮ ಸಂಯೋಜಕ ಸಲುಜಾ ಆರೋಪಿಸಿದ್ದಾರೆ.

‘‘ಆತ(ಬಲರಾಮ್ ಸಿಂಗ್)ಬಜರಂಗ ದಳದೊಂದಿಗೆ ಸಂಬಂಧ ಹೊಂದಿದ್ದನೋ ಇಲ್ಲವೋ ಎಂದು ನಮಗೆ ಗೊತ್ತಿಲ್ಲ. ಕ್ರಮ ಕೈಗೊಳ್ಳಲು ದೇಶದ ಭದ್ರತಾ ಏಜೆನ್ಸಿಗಳಿಗೆ ಅವಕಾಶ ನೀಡಲೇ ಬೇಕು. ಯಾರೇ ಅಪರಾಧ ಎಸಗಿದರೆ, ಸರಕಾರ ಆತನ ಜಾತಿ, ಧರ್ಮ ಹಾಗೂ ಪಕ್ಷವನ್ನು ಬಹಿರಂಗಪಡಿಸುವ ಬದಲು ಆತನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’’ ಎಂದು ಮಧ್ಯಪ್ರದೇಶದ ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್ ಸುದ್ದಿಸಂಸ್ಥೆ ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News