ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಪೂರೈಸಿದ ಮೊದಲ ವೇಗದ ಬೌಲರ್ ಬುಮ್ರಾ

Update: 2019-08-24 07:49 GMT

ಆ್ಯಂಟಿಗುವಾ, ಆ.24: ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಿದ ಭಾರತದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ಮೊದಲ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಡರೆನ್ ಬ್ರಾವೊ ವಿಕೆಟನ್ನು ಪಡೆದ ಬುಮ್ರಾ ಈ ಮೈಲುಗಲ್ಲು ತಲುಪಿದ್ದಾರೆ.

ಕೇವಲ 11 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ ಬುಮ್ರಾ ಭಾರತದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಹಾಗೂ ಸಹ ಆಟಗಾರ ಮುಹಮ್ಮದ್ ಶಮಿ ಅವರ ದಾಖಲೆಯನ್ನು ಹಿಂದಿಕ್ಕಿದರು. ಈ ಇಬ್ಬರು ಬೌಲರ್‌ಗಳು ತಲಾ 13 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.

11 ಪಂದ್ಯಗಳಲ್ಲಿ 50 ವಿಕೆಟ್ ಪೂರೈಸಿರುವ ಬುಮ್ರಾ ಅವರು ನರೇಂದ್ರ ಹಿರ್ವಾನಿ ಹಾಗೂ ಹರ್ಭಜನ್ ಸಿಂಗ್‌ರೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ರವಿಚಂದ್ರನ್ ಅಶ್ವಿನ್ ಅತ್ಯಂತ ಕಡಿಮೆ ಪಂದ್ಯಗಳಲ್ಲಿ(9)50 ವಿಕೆಟ್‌ಗಳನ್ನು ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ. ಮಾಜಿ ಕೋಚ್ ಅನಿಲ್ ಕುಂಬ್ಳೆ ಕಡಿಮೆ ಪಂದ್ಯಗಳಲ್ಲಿ (10 ಪಂದ್ಯಗಳು)50 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

 ಚೆಂಡುಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಬುಮ್ರಾ ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಭಾರತದ ಬೌಲರ್ ಆಗಿದ್ದಾರೆ. ಬುಮ್ರಾ 2465 ಎಸೆತಗಳಲ್ಲಿ 50 ವಿಕೆಟ್ ತಲುಪಿದ್ದರೆ, ಅಶ್ವಿನ್ 2597 ಎಸೆತಗಳಲ್ಲಿ ಈ ಮೈಲುಗಲ್ಲು ದಾಖಲಿಸಿದ್ದರು.

ಬುಮ್ರಾ ಈ ಹಿಂದೆ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಿದ ಭಾರತದ 2ನೇ ಬೌಲರ್ ಎನಿಸಿಕೊಂಡಿದ್ದರು. 2019ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದ್ದರು. ಆರ್.ಅಶ್ವಿನ್ ಟಿ-20ಯಲ್ಲಿ 50ಕ್ಕೂ ಅಧಿಕ ವಿಕೆಟ್ ಪಡೆದ ಮೊದಲ ಬೌಲರ್. ಬಲಗೈ ಸ್ಪಿನ್ನರ್ 47 ಟಿ-20 ಪಂದ್ಯಗಳಲ್ಲಿ 52 ವಿಕೆಟ್‌ಗಳನ್ನು ಪಡೆದಿದ್ದಾರೆ. ಬುಮ್ರಾ 42 ಟಿ-20 ಪಂದ್ಯಗಳಲ್ಲಿ 51 ವಿಕೆಟ್ ಉರುಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News