ಶ್ರೀಶಾಂತ್ ಮನೆಯಲ್ಲಿ ಅಗ್ನಿ ಆಕಸ್ಮಿಕ, ಅಪಾಯದಿಂದ ಪಾರಾದ ಕುಟುಂಬಿಕರು

Update: 2019-08-24 09:26 GMT

ಕೊಚ್ಚಿ, ಆ.24: ಕೊಚ್ಚಿಯ ಎಡಪಲ್ಲಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಭಾರತದ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್ ಅವರ ಮನೆಯಲ್ಲಿ ಭಾರೀ ಬೆಂಕಿ ಅನಾಹುತ ನಡೆದಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀಶಾಂತ್ ಚಿತ್ರವೊಂದರ ಶೂಟಿಂಗ್ ನಿಮಿತ್ತ ಮುಂಬೈನಲ್ಲಿದ್ದರು. ಬೆಳಗ್ಗೆ ಸುಮಾರು 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಮನೆಯೊಳಗೆ ಶ್ರೀಶಾಂತ್ ಅವರ ಪತ್ನಿ, ಮಕ್ಕಳು ಹಾಗೂ ಮನೆಕೆಲಸದವರಿದ್ದರು. ಎಚ್ಚೆತ್ತುಕೊಂಡ ನೆರೆ ಮನೆಯವರು ಬೆಂಕಿ ಹಾಗೂ ಹೊಗೆ ಆವರಿಸಿದ್ದನ್ನು ನೋಡಿ ತಕ್ಷಣವೇ ಅಗ್ನಿಶಾಮಕ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಬೆಂಕಿಯನ್ನು ನಂದಿಸಿದ ಅಗ್ನಿಶಾಮಕ ದಳದವರು ಓಪನ್‌ ಗ್ಲಾಸ್ ವೆಂಟಿಲೇಟರ್‌ನ್ನು  ಪುಡಿ ಮಾಡಿ ಮನೆಯೊಳಗೆ ಪ್ರವೇಶಿಸಿ ಶ್ರೀಶಾಂತ್ ಪತ್ನಿ, ಮಕ್ಕಳು ಹಾಗೂ ಮನೆಗೆಲಸದವರನ್ನು ತೆರವುಗೊಳಿಸಿದರು.

ಮನೆಯ ತಳ ಮಾಳಿಗೆಯಲ್ಲಿರುವ ಡ್ರಾಯಿಂಗ್ ರೂಮ್‌ನಲ್ಲಿ  ಬೆಂಕಿ ಕಾಣಿಸಿಕೊಂಡಿತ್ತು. ಪತ್ನಿ ಹಾಗೂ ಮಕ್ಕಳು ಮೊದಲ ಮಾಳಿಗೆಯಲ್ಲಿದ್ದರು ಎಂದು ಶ್ರೀಶಾಂತ್ ತಿಳಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ಅಗ್ನಿ ಆಕಸ್ಮಿಕ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಮನೆಯಿಂದ ಹೊರಗೆ ತೆರಳಿರುವ ಶ್ರೀಶಾಂತ್ ಕುಟುಂಬ ಅವರ ಬರುವಿಕೆಯನ್ನು ಕಾಯುತ್ತಿದೆ.

ಭಾರತದ ಪರ 2 ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ ಶ್ರೀಶಾಂತ್ 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್ಗಳನ್ನು ಪಡೆದಿದ್ದರು. 2013ರ ಐಪಿಎಲ್‌ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐಯಿಂದ ಆಜೀವ ನಿಷೇಧ ಎದುರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಸಿಸಿಐ ಅಂಬುಡ್ಸ್‌ಮನ್  ಜಸ್ಟಿಸ್(ನಿವೃತ್ತ)ಡಿಕೆ ಜೈನ್ ಅವರು ಶ್ರೀಶಾಂತ್ ವಿರುದ್ಧ ನಿಷೇಧನ್ನು ಏಳು ವರ್ಷಕ್ಕೆ ಇಳಿಸಿದ್ದು, ಸೆಪ್ಟಂಬರ್, 2020ಕ್ಕೆ ನಿಷೇಧ ಅವಧಿ ಅಂತ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News