ನೆರೆ ಸಂತ್ರಸ್ತರ ಮನೆ ನಿರ್ಮಾಣ ವೆಚ್ಚ ಏರಿಕೆಗೆ ಕಾಂಗ್ರೆಸ್ ಒತ್ತಾಯ

Update: 2019-08-24 13:51 GMT

ಬೆಂಗಳೂರು, ಆ.24: ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಲು ನಿಗದಿ ಪಡಿಸಿರುವ 5 ಲಕ್ಷ ರೂ.ಗಳ ವೆಚ್ಚವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಕೆಪಿಸಿಸಿ ವತಿಯಿಂದ ರಚಿಸಲಾಗಿದ್ದ ನೆರೆ ಪರಿಸ್ಥಿತಿ ಅಧ್ಯಯನ ತಂಡದ ಸದಸ್ಯರಾದ ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಇನ್ನಿತರರು ಒತ್ತಾಯಿಸಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಗಣೇಶ್ ಹುಕ್ಕೇರಿ ಹಾಗೂ ಆನಂದ್ ನ್ಯಾಮಗೌಡ ಮಾತನಾಡಿದರು.

ಸಂತ್ರಸ್ತರ ಮನೆ ನಿರ್ಮಾಣ ವೆಚ್ಚವನ್ನು ಹೆಚ್ಚಿಸುವುದರ ಜೊತೆಗೆ ನೀರಿನಿಂದ ನೆನೆದಿರುವ ಮನೆಗಳು ಮುಂದಿನ ದಿನಗಳಲ್ಲಿ ಬೀಳುವ ಆತಂಕವಿದೆ. ಆದುದರಿಂದ, ಅಂತಹ ಮನೆಗಳನ್ನು ಪರಿಗಣಿಸಿ ಪರಿಹಾರ ನೀಡಬೇಕು ಎಂದು ಎಂ.ಬಿ.ಪಾಟೀಲ್ ಒತ್ತಾಯಿಸಿದರು.

ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹ ಪೀಡಿತ ಪ್ರದೇಶಗಳಿಗೆ ನಮ್ಮ ತಂಡ ಭೇಟಿ ನೀಡಿ, ಪ್ರವಾಹದ ಹಾನಿಯ ಬಗ್ಗೆ 10 ಅಂಶಗಳ ವರದಿ ತಯಾರಿಸಿ, ಮುಖ್ಯಮಂತ್ರಿಗೆ ಸಲ್ಲಿಸುತ್ತೇವೆ. 3 ಲಕ್ಷ 45 ಸಾವಿರ ಕ್ಯೂಸೆಕ್ಸ್ ನೀರಿನ ಹರಿವನ್ನು ಉತ್ತರ ಕರ್ನಾಟಕ ಎದುರಿಸಬಹುದು. ಆದರೆ, 6 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಂದ ಪರಿಣಾಮ ದೊಡ್ಡ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಅವರು ಹೇಳಿದರು.

ಬಾಗಲಕೋಟೆ, ಗೋಕಾಕ್, ಯಮಕನಮರಡಿ, ಮುದ್ದೆಬಿಹಾಳ, ಜಮಖಂಡಿ ಸೇರಿ ಹಲವು ಕಡೆ ಪ್ರವಾಹವಾಗಿ, ಲಕ್ಷಾಂತರ ಎಕರೆ ಕೃಷಿ ಭೂಮಿ ನಾಶವಾಗಿದೆ. ಮನೆ, ಮಠಗಳು ನಿರ್ನಾಮವಾಗಿವೆ. ರಸ್ತೆಗಳು ಹಾಳಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಕ್ಕಳ ದಾಖಲೆ, ಪುಸ್ತಕಗಳು ಹಾನಿಯಾಗಿವೆ ಎಂದು ಅವರು ಹೇಳಿದರು.

ಪ್ರವಾಹದಿಂದ ಉಂಟಾಗಿರುವ ಎಲ್ಲ ಸಮಸ್ಯೆಗಳ ಬಗ್ಗೆ ಸಂಪೂರ್ಣ ದಾಖಲೆ ಸಂಗ್ರಹಿಸಿದ್ದೇವೆ. ಮುಖ್ಯಮಂತ್ರಿ ಭೇಟಿಗೆ ಕಾಲಾವಕಾಶ ಕೇಳಿದ್ದು, ಅವಕಾಶ ಸಿಕ್ಕಿದ ಕೂಡಲೇ ಅವರಿಗೆ ಸಂಪೂರ್ಣ ಮಾಹಿತಿ ನೀಡಿ, ಪರಿಹಾರ ಕಾರ್ಯಕ್ರಮ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಪ್ರವಾಹ ಪರಿಸ್ಥಿತಿ ವಿಚಾರದಲ್ಲಿ ನಾನು ರಾಜ್ಯ ಸರಕಾರದ ವಿರುದ್ಧ ಯಾವುದೇ ಬಗೆಯಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ, ಕೇಂದ್ರ ಸರಕಾರ ರಾಜ್ಯಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಆಕ್ಷೇಪವಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಯಾವ ಕಾರಣಕ್ಕಾಗಿ ಇನ್ನೂ ಪರಿಹಾರ ಕೊಟ್ಟಿಲ್ಲ ಎಂದು ಆರೋಪ ಮಾಡುವುದಿಲ್ಲ. ಈಗಲೂ ಸಮಯವಿದೆ, ಕೇಂದ್ರ ಸರಕಾರ ಕೂಡಲೆ ಪರಿಹಾರ ಬಿಡುಗಡೆ ಮಾಡಲಿ. ಕೊಡಗು ಜಿಲ್ಲೆಗೆ ಕೊಟ್ಟಂತೆ ಉತ್ತರ ಕರ್ನಾಟಕಕ್ಕೂ ತ್ವರಿತವಾಗಿ ಪರಿಹಾರ ನೀಡಲಿ ಎಂದು ಎಂ.ಬಿ.ಪಾಟೀಲ್ ಒತ್ತಾಯಿಸಿದರು

40 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗಾಗಿ ಹೆಚ್ಚಿನ ಪರಿಹಾರವನ್ನು ಕೇಂದ್ರದಿಂದ ಪಡೆಯಬೇಕು. ಈ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಅಲ್ಲದೇ, ಅತಿವೃಷ್ಟಿಗೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಒಂದು ವಾರದ ವಿಶೇಷ ಅಧಿವೇಶನ ಕರೆಯಬೇಕು ಎಂದು ಅವರು ಆಗ್ರಹಿಸಿದರು.

ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ, ಶೌಚಾಲಯ, ಸ್ನಾನ ಗಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಿರಾಶ್ರಿತರಿಗೆ ಹೊದಿಕೆ, ಪಾತ್ರೆ ಸಾಮಾನುಗಳು, ಬಟ್ಟೆ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯ, ಪುಸ್ತಕಗಳನ್ನು ಖರೀದಿಸಲು ಒಂದು ಲಕ್ಷ ರೂ.ಪರಿಹಾರ ನೀಡಬೇಕು ಎಂದು ಅವರು ಹೇಳಿದರು.

ಜಾನುವಾರುಗಳನ್ನು ಕಳೆದುಕೊಂಡವರಿಗೆ ಕನಿಷ್ಠ 50 ಸಾವಿರ ರೂ.ಪರಿಹಾರ ನೀಡಬೇಕು. ಕಬ್ಬು ಬೆಳೆಗಾರರಿಗೆ ಮಾನದಂಡದಂತೆ ಒಂದು ಲಕ್ಷ ರೂ.ಪರಿಹಾರ ನೀಡಬೇಕು. ನಿರಾಶ್ರಿತರಿಗೆ ನರೇಗಾ ಯೋಜನೆಯಡಿ ಉದ್ಯೋಗ ಸೃಷ್ಟಿ ಮಾಡಿ, ಒಂದು ವರ್ಷದವರೆಗೆ ಕನಿಷ್ಠ ಕೂಲಿ ವ್ಯವಸ್ಥೆ ಮಾಡಬೇಕು ಎಂದು ಎಂ.ಬಿ.ಪಾಟೀಲ್ ಒತ್ತಾಯಿಸಿದರು.

ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಪ್ರವಾಹ ಸಂತ್ರಸ್ಥರ ನೆರವಿಗೆ ಸರಕಾರ ಮುಂದಾಗಬೇಕು. ಸಾಕಷ್ಟು ರೈತರು ಹಾನಿ ಮಾಡಿಕೊಂಡಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳು ಪ್ರವಾಹದಿಂದ ನಷ್ಟ ಮಾಡಿಕೊಂಡಿದ್ದಾರೆ. ಲಕ್ಷಾಂತರ ರೂ.ನಷ್ಟ ಅವರನ್ನು ಬಾಧಿಸಿದೆ. ಸರಕಾರ ಅವರ ನೆರವಿಗೂ ಮುಂದಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News