ಭಟ್ಕಳ: ಅಂಜುಮನ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ

Update: 2019-08-24 17:22 GMT

ಭಟ್ಕಳ: ಭಾರತೀಯರಾದ ನಾವೆಲ್ಲ ನಮ್ಮಲಿರುವ ಜಾತಿ ಮತ ಪಂಥ ಪ್ರದೇಶ ಧರ್ಮ ಭಾಷೆ ಇತ್ಯಾದಿ ಭಿನ್ನಾಭಿಪ್ರಾಯಗಳನ್ನು ಮರೆತು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಸಹಬಾಳ್ವೆ ನಡೆಸಿ, ಸದೃಢ ಭಾರತ ನಿರ್ಮಾಣ ಮಾಡಲು ಮುಂದಾಗಬೇಕೆಂದು ಅಂಜುಮನ್ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ಪ್ರೊ. ಮುಸ್ತಾಕ್ ಕೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಇವರು ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಹಬಾಳ್ವೆ ಮತ್ತು ಭಾವೈಕ್ಯತೆಯ ಮಹತ್ವವನ್ನು ಸಾರುತ್ತ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಪ್ರತಿಪಾದಿಸಿದರು. ಭಾರತಿಯರೆಲ್ಲ ಏಕತೆಯಿಂದಿದ್ದು, ಪರಸ್ಪರರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರೆ ನಮ್ಮ ದೇಶದ ಘನತೆ ವಿಶ್ವಮಟ್ಟಕ್ಕೆ ಬೆಳೆದು ವಿಶ್ವವೇ ನಮ್ಮನ್ನು ಗೌರವಿಸುವಂತಾಗುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಯಾದ ಪ್ರೊ. ಆರ್. ಎಸ್ ನಾಯಕ ಪ್ರಾಸ್ತಾವಿಕವಾಗಿ ಮಾತನಾಡುತ್ತ, ರಾಷ್ಟ್ರೀಯ ಭಾವೈಕ್ಯತೆಯನ್ನು ಕಾಪಾಡುವಲ್ಲಿ ವಿದ್ಯಾರ್ಥಿಗಳ ಮತ್ತು ಯುವಜನರ ಪಾತ್ರ ಅತ್ಯಂತ ಮುಖ್ಯವೆಂದು ಪ್ರತಿಪಾದಿಸಿ, ನೆರೆದವರನ್ನೆಲ್ಲ ಆತ್ಮೀಯವಾಗಿ ಸ್ವಾಗತಿಸಿದರು. ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್. ಎ. ಅತ್ತರ್ ಉಪಸ್ಥಿತರಿದ್ದರು.

ಕೊನೆಯಲ್ಲಿ ಪ್ರೊ. ಎ. ಎಂ. ಮುಲ್ಲಾ ವಂದಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ರಾಷ್ಟ್ರೀಯ ಭಾವೈಕ್ಯತೆಯ ಕುರಿತು ಪ್ರತಿಜ್ಞೆ ಸ್ವೀಕರಿಸಿದರು. ಆರ್. ಎಸ್. ನಾಯಕ ಪ್ರತಿಜ್ಞಾವಿಧಿ ಬೋಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News