ಆ. 29: ಟಿಬೆಟಿಯನ್ ಧರ್ಮಗುರು ದಲಾಯಿಲಾಮ ಮಂಗಳೂರಿಗೆ
Update: 2019-08-26 18:26 IST
ಮಂಗಳೂರು, ಆ.26: ಟಿಬೆಟಿಯನ್ ಧರ್ಮಗುರು ದಲಾಯಿಲಾಮ ಆ. 29ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ಅಂದು ಮಧ್ಯಾಹ್ನ 12:20ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆ. 30ರಂದು ನಗರದ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯುವ ಅಖಿಲ ಭಾರತ ಕ್ಯಾಥೊಲಿಕ್ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಭಾಗವಹಿಸುವರು.
ಆ.31ರಂದು ಬೆಳಗ್ಗೆ 7 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಪೂರ್ವಸಿದ್ಧತಾ ಸಭೆ
ದಲಾಯಿಲಾಮ ಆಗಮನದ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಭದ್ರತೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅವರು ಸೂಚಿಸಿದರು.