ಸಮಾನ ನಾಗರಿಕ ಸಂಹಿತೆ ಕುರಿತ ಮನವಿ ವಿಚಾರಣೆಗೆ ನ್ಯಾಯಾಲಯ ಸಮ್ಮತಿ

Update: 2019-08-26 13:46 GMT

ಹೊಸದಿಲ್ಲಿ,ಆ.26: ಸಮಾನ ನಾಗರಿಕ ಸಂಹಿತೆಯನ್ನು ರೂಪಿಸಲು ನ್ಯಾಯಿಕ ಆಯೋಗ ಅಥವಾ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲು ಕೇಂದ್ರ ಸರಕಾರಕ್ಕೆ ಸೂಚಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ನಡೆಸಲು ದಿಲ್ಲಿ ನ್ಯಾಯಾಲಯ ಸೋಮವಾರ ಸಮ್ಮತಿ ಸೂಚಿಸಿದೆ.

ಮಹಿಳೆಯರ ಘನತೆ, ನ್ಯಾಯ ಮತ್ತು ಸಮಾನತೆಯ ಭರವಸೆ ನೀಡಲು ಸಮಾನ ನಾಗರಿಕ ಸಂಹಿತೆಯನ್ನು ರೂಪಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ಮುಖ್ಯ ನ್ಯಾಯಾಧೀಶ ಡಿ.ಎನ್ ಪಟೇಲ್ ಮತ್ತು ನ್ಯಾಯಾಧೀಶ ಸಿ.ಹರಿಶಂಕರ್ ಅವರ ಪೀಠಕ್ಕೆ ಸಲ್ಲಿಸಲಾದ ದಾವೆಯಲ್ಲಿ ಮನವಿ ಮಾಡಲಾಗಿದೆ.

ನ್ಯಾಯವಾದಿ ಅಭಿನವ್ ಬೆರಿ ಸಲ್ಲಿಸಿರುವ ದಾವೆಯಲ್ಲಿ, ಎಲ್ಲ ಧರ್ಮಗಳು ಮತ್ತು ಜನಾಂಗಗಳ ಅತ್ಯುತ್ತಮ ಆಚರಣೆಗಳು, ಅಭಿವೃದ್ಧಿ ಹೊಂದಿದ ದೇಶಗಳ ನಾಗರಿಕ ಕಾನೂನುಗಳು ಮತ್ತು ಅಂತರ್‌ರಾಷ್ಟ್ರೀಯ ಸಮ್ಮೇಳನಗಳನ್ನು ಪರಿಗಣಿಸುವ ಮೂಲಕ ಮೂರು ತಿಂಗಳುಗಳ ಒಳಗಾಗಿ ಸಮಾನ ನಾಗರಿಕ ಸಂಹಿತೆಯ ಕರಡು ಮಸೂದೆಯನ್ನು ರಚಿಸಿ ಅದನ್ನು ಕನಿಷ್ಟ 90 ದಿನಗಳ ಕಾಲ ಸಾರ್ವಜನಿಕರ ಚರ್ಚೆ ಮತ್ತು ಅಭಿಪ್ರಾಯಗಳನ್ನು ಪಡೆಯಲು ತನ್ನ ಜಾಲತಾಣದಲ್ಲಿ ಪ್ರಕಟಿಸಲು ಕಾನೂನು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ಕೋರಲಾಗಿದೆ.

ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಇನ್ನೊಂದು ಮನವಿಯಲ್ಲಿ ಏಕತೆ, ಬಾಂಧವ್ಯ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಪ್ರೋತ್ಸಾಹಿಸಲು ಸಮಾನ ನಾಗರಿಕ ಸಂಹಿತೆಯನ್ನು ರೂಪಿಸಬೇಕು ಎಂದು ಕೋರಲಾಗಿದ್ದು ಇದರ ವಿಚಾರಣೆಯೂ ನ್ಯಾಯಾಲಯದಲ್ಲಿ ಬಾಕಿಯುಳಿದಿದೆ. ಉಪಧ್ಯಾಯ ಅವರ ಮನವಿಯನ್ನು ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಮನವಿಯು ಕಾನೂನು ಪ್ರಕಾರ ಸಮರ್ಥನೀಯವಲ್ಲ ಹಾಗಾಗಿ ಅದನ್ನು ಪರಿಗಣಿಸಬಾರದು ಎಂದು ಕೋರಿ ಈ ಪ್ರಕರಣದಲ್ಲಿ ತನ್ನನ್ನು ಒಂದು ಪಕ್ಷವಾಗಿ ಪರಿಗಣಿಸುವಂತೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News