ಜನೌಷಧಿ ಕೇಂದ್ರಗಳಲ್ಲಿ ಒಂದು ರೂ.ಗೆ ಸ್ಯಾನಿಟರಿ ಪ್ಯಾಡ್‌ಗಳು
ಹೊಸದಿಲ್ಲಿ,ಆ.26: ಮಹಿಳೆಯರ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಮಹಿಳೆಯರು ಮುಟ್ಟಿನ ಸಮಯದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್‌ಗಳನ್ನು ಜನೌಷಧಿ ಕೇಂದ್ರಗಳಲ್ಲಿ ಒಂದು ರೂ.ಗೆ ಮಾರಾಟ ಮಾಡಲು ನಿರ್ಧರಿಸಿದೆ.ಸದ್ಯ ಈ ಪ್ಯಾಡ್‌ಗಳ ಬೆಲೆ ಒಂದಕ್ಕೆ 2.50ರೂ. ಇದೆ. ಸುವಿಧ ಹೆಸರಿನ ಸ್ಯಾನಿಟರಿ ಪ್ಯಾಡ್‌ಗಳು ಆಗಸ್ಟ್ 27ರಿಂದ ದೇಶಾದ್ಯಂತವಿರುವ 5,500 ಜನೌಷಧಿಗಳಲ್ಲಿ ಒಂದು ರೂ.ಗೆ ಲಭ್ಯವಾಗಲಿದೆ ಎಂದು ರಾಸಾಯನಿಕ ಮತ್ತು ಗೊಬ್ಬರ ಸಹಾಯಕ ಸಚಿವ ಮನ್ಸುಖ್ ಮಾಂಡವಿಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸದ್ಯ ಹತ್ತು ರೂ.ಗೆ ಒಂದು ಪ್ಯಾಕೆಟ್‌ನಲ್ಲಿ ನಾಲ್ಕು ಪ್ಯಾಡ್‌ಗಳನ್ನು ಮಾರಾಟ ಮಾಡಲಾಗುತ್ತಿದ್ದು ಮಂಗಳವಾರದಿಂದ ಇದರ ಮೌಲ್ಯ 4ರೂ.ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಸ್ಯಾನಿಟರಿ ಪ್ಯಾಡ್ ತಯಾರಕರು ತಮ್ಮ ಉತ್ಪಾದನಾ ವೆಚ್ಚದಲ್ಲಿ ಅವುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಹಾಗಾಗಿ ನಾವು ಇವುಗಳ ದರವನ್ನು ಇಳಿಕೆ ಮಾಡಲು ಸಬ್ಸಿಡಿ ಒದಗಿಸುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
2018 ಮೇಯಿಂದ ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಕಡಿಮೆ ಬೆಲೆಗೆ ಮಾರಲ್ಪಡುತ್ತಿವೆ. ಕಳೆದ ಒಂದು ವರ್ಷದಲ್ಲಿ ಒಟ್ಟು 2.2 ಕೋಟಿ ಪ್ಯಾಡ್‌ಗಳು ಮಾರಾಟವಾಗಿವೆ. ದರದಲ್ಲಿ ಕಡಿತಗೊಳಿಸುವುದರಿಂದ ಮಾರಾಟ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.