×
Ad

​ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ಆರೋಪ: ಇಬ್ಬರು ಮಹಿಳೆಯರು ಸೆರೆ

Update: 2019-08-26 19:32 IST

ಮಂಗಳೂರು, ಆ. 26: ಸೋಮೇಶ್ವರ ಸಮೀಪದ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೆಪ್ಪಿನಮೊಗರು ನಿವಾಸಿ ಸರಸ್ವತಿ (37), ಕಾಸರಗೋಡು ಮಂಜೇಶ್ವರ ನಿವಾಸಿ ಆರುಂಧತಿ (38) ಬಂಧಿತ ಆರೋಪಿಗಳು. ರಂಜಿತಾ ಹಾಗೂ ದಿಲ್‌ರಾಜ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ

ಮಂಗಳೂರು ನಗರ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ದ್ವಾರದ ಬಳಿಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಯುವತಿ ಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದರು. ಇಬ್ಬರು ಮಹಿಳೆಯರಿಂದ 20,800 ರೂ. ನಗದು, ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಅವರು ಈ ಮನೆಯನ್ನು ಬಾಡಿಗೆಗೆ ಪಡೆದು ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣವನ್ನು ಗಳಿಸುತ್ತಿದ್ದರು. ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಓರ್ವ ನೊಂದ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಯುವತಿಯನ್ನು ವೇಶ್ಯಾವಾಟಿಕೆಗೆ ಬೆಂಗಳೂರಿನಿಂದ ಕರೆತಂದ ಆರೋಪಿ ರಂಜಿತಾ ಹಾಗೂ ವೇಶ್ಯಾವಾಟಿಕೆ ದಂಧೆಗೆ ಮನೆಯನ್ನು ಬಾಡಿಗೆಗೆ ನೀಡಿದ ಮನೆಯ ಮಾಲಕ ದಿಲ್‌ರಾಜ್ ಎಂಬವರು ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕೆ, ಸಿಸಿಬಿ ಪಿಎಸ್ಸೈ ಕಬ್ಬಾಳ್‌ರಾಜ್ ಎಚ್.ಡಿ. ಹಾಗೂ ಸಿಸಿಬಿ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News