ಮೋದಿ ಜೊತೆ ಮಾತುಕತೆ ನಂತರ ಕಾಶ್ಮೀರದ ವಿಚಾರದಲ್ಲಿ ಟ್ರಂಪ್ ಹೇಳಿದ್ದು ಹೀಗೆ…

Update: 2019-08-26 15:35 GMT

ಪ್ಯಾರಿಸ್/ಹೊಸದಿಲ್ಲಿ,ಆ.26: ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಸೋಮವಾರ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ಕಳೆದ ರಾತ್ರಿ ಈ ಬಗ್ಗೆ ಮಾತುಕತೆ ನಡೆಸಿದ್ದೇವೆ. ಕಾಶ್ಮೀರದ ಪರಿಸ್ಥಿತಿಯ ಮೇಲೆ ಸಂಪೂರ್ಣ ಹಿಡಿತವಿದೆ ಎಂದು ಪ್ರಧಾನಿ ಮೋದಿ ಭಾವಿಸಿದ್ದಾರೆ.

ಅವರು ಪಾಕಿಸ್ತಾನದ ಜೊತೆ ಮಾತನಾಡಲಿದ್ದಾರೆ ಮತ್ತು ಅವರು ಉತ್ತಮವಾದುದನ್ನೇ ಮಾಡುತ್ತಾರೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಎರಡೂ ದೇಶಗಳ ಉತ್ತಮ ಸ್ನೇಹಿತ. ಆದರೆ ಈ ವಿಷಯವನ್ನು ಅವರೊಬ್ಬರೇ ನಿಭಾಯಿಸಬಲ್ಲರು ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾಶ್ಮೀರ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವವನ್ನು ತಳ್ಳಿಹಾಕಿದ್ದ ಪ್ರಧಾನಿ ಮೋದಿ, 1947ಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ಒಂದೇ ರಾಷ್ಟ್ರವಾಗಿತ್ತು ಮತ್ತು ಅವುಗಳು ತನ್ನ ಸಮಸ್ಯೆಗಳನ್ನು ತಾವಾಗಿಯೇ ಬಗೆಹರಿಸಲು ಸಮರ್ಥವಾಗಿವೆ ಎಂದು ಸ್ಪಷ್ಟಪಡಿಸಿದ್ದರು.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅನೇಕ ದ್ವಿಪಕ್ಷೀಯ ಸಮಸ್ಯೆಗಳಿವೆ. ನಾವು ಮೂರನೆ ದೇಶಕ್ಕೆ ತೊಂದರೆ ನೀಡಲು ಬಯಸುವುದಿಲ್ಲ. ಈ ಸಮಸ್ಯೆಗಳನ್ನು ನಾವು ದ್ವಿಪಕ್ಷೀಯವಾಗಿ ಚರ್ಚೆ ನಡೆಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಮೋದಿ ತಿಳಿಸಿದ್ದರು. ಪ್ರಧಾನಿ ಮೋದಿ ಮತ್ತು ಟ್ರಂಪ್ ಫ್ರಾನ್ಸ್‌ನ ಬಿಯರಿಟ್ಸ್‌ನಲ್ಲಿ 40 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಮತ್ತು ವ್ಯಾಪಾರ ಮುಖ್ಯ ವಿಷಯವಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News