ತಮಿಳುನಾಡಿನಲ್ಲಿ ಜಾತಿ ಸಂಘರ್ಷ: ಅಂಬೇಡ್ಕರ್ ಪ್ರತಿಮೆ ಧ್ವಂಸ

Update: 2019-08-26 16:38 GMT

ಚೆನ್ನೈ, ಆ. 26: ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸಕ್ಕೆ ಕಾರಣವಾದ ವೇದಾರಣ್ಯಂದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ 37 ಮಂದಿಯನ್ನು ಪೊಲೀಸರು ರವಿವಾರ ಬಂಧಿಸಿದಾರೆ. ಬಂಧಿತರಲ್ಲಿ 16 ಮಂದಿ ದಲಿತರು ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ ವೇದಾರಣ್ಯಂ ಪಟ್ಟಣದಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸಗೊಳಿಸಿದ ಬಳಿಕ ಘರ್ಷಣೆ ಆರಂಭವಾಗಿತ್ತು. ಆದರೆ, ಘಟನೆ ನಡೆದ 12 ಗಂಟೆಗಳಲ್ಲಿ ಪ್ರತಿಮೆಯನ್ನು ಮರು ಸ್ಥಾಪಿಸಲಾಗಿತ್ತು. 

ಘರ್ಷಣೆಗೆ ಕಾರಣ: 
ವೇದಾರಣ್ಯ ಪೊಲೀಸ್ ಠಾಣೆ ಸಮೀಪ ದಲಿತ ಸಮುದಾಯಕ್ಕೆ ಸೇರಿದ ಪಾದಚಾರಿಯೊಬ್ಬರಿಗೆ ಮೇಲ್ಜಾತಿ ಸಂಘಟನೆಗೆ ಸೇರಿದ ವಾಹನವೊಂದು ರವಿವಾರ ಸಂಜೆ ಢಿಕ್ಕಿ ಹೊಡೆದಿತ್ತು. ಅವರು ಗಾಯಗೊಂಡಿದ್ದರು. ಅನಂತರ ವಾಹನದ ಚಾಲಕ ಪೊಲೀಸರ ಆಶ್ರಯ ಪಡೆದುಕೊಂಡಿದ್ದರು. ಇದರಿಂದ ಆಕ್ರೋಶಿತರಾದ ದಲಿತ ಸಮುದಾಯದ ಸದಸ್ಯರು ಪೊಲೀಸ್ ಠಾಣೆಗೆ ಕಲ್ಲೆಸೆದರು ಹಾಗೂ ವಾಹನಕ್ಕೆ ಬೆಂಕಿ ಹಚ್ಚಿದರು. 

ಈ ಸುದ್ದಿ ಹರಡುತ್ತಿದ್ದಂತೆ ಮೇಲ್ಜಾತಿಯ ಜನರು ಗುಂಪು ಸೇರಿದರು ಹಾಗೂ ಅಂಬೇಡ್ಕರ್ ಪ್ರತಿಮೆಗೆ ಹಾನಿ ಉಂಟು ಮಾಡಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು 37 ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ 16 ಮಂದಿ ದಲಿತ ಸಮುದಾಯಕ್ಕೆ ಸೇರಿದವರು ಉಳಿದವರು ಮೇಲ್ಜಾತಿಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಸಹಜ ಸ್ಥಿತಿಯತ್ತ ವೇದಾರಣ್ಯಂ: 
ಸೋಮವಾರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು ವಾಹನಗಳ ಸಂಚಾರ ಆರಂಭವಾಗಿದೆ. ಪಟ್ಟಣದಲ್ಲಿ ಪ್ರತಿ 50 ಮೀಟರ್‌ಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಪಟ್ಟಣದ ಹೆಚ್ಚಿನ ಅಂಗಡಿಗಳು ಮುಚ್ಚಿವೆ. 
ಐಜಿಪಿ (ಕೇಂದ್ರ ವಲಯ) ವಿ. ವರದರಾಜು, ಡಿಐಜಿ (ತಂಜಾವೂರು ವಲಯ) ಜೆ. ಲೋಕನಾಥನ್ ಹಾಗೂ ನಾಗಪಟ್ಟಿಣಂ ಹಾಗೂ ತಿರುವರೂರು ಎಸ್ಪಿ ವೇದಾರಣ್ಯಂನಲ್ಲಿ ಭದ್ರತಾ ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News