ಪ್ರಜಾಸತ್ತಾತ್ಮಕ ಹಕ್ಕುಗಳು ಅಪಾಯದಲ್ಲಿ: ಕೆ.ಶಂಕರ್ ಆತಂಕ
ಕುಂದಾಪುರ, ಆ.26: ಕಾರ್ಮಿಕ ವರ್ಗದ ಕಾನೂನು ಕಾಪಾಡಿಕೊಳ್ಳಲು ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಆಗಬೇಕಾಗಿದೆ. ಸಂಘ ಕಟ್ಟುವ ಹಾಗೂ ಹೋರಾಟ ನಡೆಸುವ ಹಕ್ಕುಗಳ ಮೇಲೆ ಕೇಂದ್ರ ಸರಕಾರ ಪ್ರಾಯೋಜಿತ ದಾಳಿಗಳನ್ನು ನಡೆಸಲು ಮುಂದಾಗುತ್ತಿದೆ. ಈ ಮೂಲಕ ಇಂದು ಪ್ರಜಾ ಸತ್ತಾತ್ಮಕ ಹಕ್ಕುಗಳು ಅಪಾಯದಲ್ಲಿವೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ಹೆಂಚು ಕಾರ್ಮಿಕ ಭವನದಲ್ಲಿ ರವಿವಾರ ನಡೆದ ಕುಂದಾಪುರ ಸಿಐಟಿಯು ನಾಲ್ಕನೆ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರವು ತನ್ನ ಲಾಭಕ್ಕಾಗಿ ಕೆಲವೇ ಕೆಲವು ಉದ್ಯಮಪತಿಗಳಿಗೆ ತನ್ನ ಒಪ್ಪಂದದಂತೆ ವಿಪರೀತ ಲಾಭ ಮಾಡಿಕೊಡುತ್ತಿದೆ. ನೋಟ್ ರದ್ಧತಿ ಪರಿ ಣಾಮವಾಗಿ ದೇಶದ ಬಹಳಷ್ಟು ಕೈಗಾರಿಕೆಗಳು ಅವನತಿಯತ್ತ ಸಾಗುತ್ತಿದ್ದು ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶವು ಮುಂದಿನ ದಿನಗಳಲ್ಲಿ ಬಾರಿ ಬೆಲೆ ತೆರ ಬೇಕಾದ ಪರಿಸ್ಥಿತಿ ಬರಲಿದೆ ಎಂದರು.
ಸರಕಾರವು ತನ್ನ ಆಡಳಿತ ವೈಪಲ್ಯ ಮರೆಮಾಚಲು ಭಾವನಾತ್ಮಕ ವಿಚಾರ ಮುನ್ನಲೆಗೆ ತರುತ್ತಿದೆ. ಅಧಿಕಾರ ರಕ್ಷಣೆಗೆ ಮುಂದೆ ಎಲ್ಲಾ ರೀತಿಯ ತಂತ್ರಗಳನ್ನು ಅದು ಅನುಸರಿಸಲಿದೆ. ದೇಶದ ಕಾರ್ಮಿಕ ವರ್ಗ ತನ್ನ ಸೌಲಭ್ಯ ಜೊತೆ, ಜನತೆಯನ್ನು ರಕ್ಷಿಸಲು ತೀವ್ರ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಅವರು ಹೇಳಿದರು.
ಸಮ್ಮೇಳನದ ಧ್ವಜಾರೋಹಣವನ್ನು ಹಿರಿಯ ಕಾರ್ಮಿಕ ಮುಖಂಡ ವಿ.ನರಸಿಂಹ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಿಐಟಿಯು ಮುಖಂಡ ಎಚ್. ನರಸಿಂಹ ವಹಿಸಿದ್ದರು. ಮುಖಂಡರಾದ ಸುರೇಶ್ ಕಲ್ಲಾಗರ, ಮಹಾಬಲ ವಡೇರಹೋಬಳಿ, ರಾಜೀವ ಪಡುಕೋಣೆ, ಜಿ.ಡಿ.ಪಂಜು, ಗಣೇಶ ತೊಂಡೆ ಮಕ್ಕಿ, ಜಯಶ್ರೀ, ಸುಶೀಲ ನಾಡ ಉಪಸ್ಥಿತರಿದ್ದರು.
ಸಿಐಟಿಯು ತಾಲೂಕು ಕಾರ್ಯದರ್ಶಿ ವೆಂಕಟೇಶ್ ಕೋಣಿ ವರದಿ ಹಾಗೂ ಕೋಶಾಧಿಕಾರಿ ಶೀಲಾವತಿ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ 17 ಮಂದಿಯ ಕುಂದಾಪುರ ತಾಲೂಕು ಸಮಿತಿಗೆ ಸಂಚಾಲಕರಾಗಿ ಎಚ್.ನರ ಸಿಂಹ, ಸಹಸಂಚಾಲಕರಾಗಿ ಮಹಾಬಲ ವಡೇರಹೋಬಳಿ, ಸಂತೋಷ ಹೆಮ್ಮಾಡಿ ಮತ್ತು 15 ಮಂದಿಯ ಬೈಂದೂರು ತಾಲೂಕು ಸಮಿತಿಗೆ ಸಂಚಾಲಕ ರಾಗಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಸಹ ಸಂಚಾಲಕರಾಗಿ ಉದಯ ಮೊಗೇರಿ, ಸಿಂಗಾರಿ ಆಯ್ಕೆಯಾದರು.
ಸಮ್ಮೇಳನದ ಪ್ರಮುಖ ನಿರ್ಣಯಗಳು
ಸಮ್ಮೇಳನದಲ್ಲಿ ಮರಳುಗಾರಿಕೆಯನ್ನು ಶೀಘ್ರವೇ ಆರಂಭ, ಹೆಂಚು ಕೈಗಾರಿಕೆಗೆ ಸರಕಾರದ ಬೆಂಬಲ, ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ, ಕಟ್ಟಡ ಕಾರ್ಮಿಕರ ಸೆಸ್ ಕಾನೂನು ರದ್ದತಿ, ಅಕ್ಷರ ದಾಸೋಹ ನೌಕರರಿಗೆ ಸರಕಾರಿ ನೌಕರರೆಂದು ಪರಿಗಣನೆ, ಅಂಗನವಾಡಿ ಯಲ್ಲಿಯೇ ಎಲ್ಕೆಜಿ, ಯಕೆಜಿ ತೆರೆಯಲು ಆಗ್ರಹಿಸಿ ನಿರ್ಣಯ ಮಂಡಿಸಲಾಯಿತು.