27ರಂದು ಕಾಶ್ಮೀರಕ್ಕೆ ಕೇಂದ್ರ ಸರಕಾರದ ತಂಡ ಭೇಟಿ

Update: 2019-08-26 14:59 GMT

ಶ್ರೀನಗರ, ಆ.26: ಕಾಶ್ಮೀರದಲ್ಲಿ ಮಾರುಕಟ್ಟೆ ಮತ್ತು ಶಾಲೆಗಳು ಮುಚ್ಚಿರುವ ಕಾರಣ ಸತತ 22ನೇ ದಿನವೂ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ನಗರದಲ್ಲಿ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ರದ್ದಾಗಿದ್ದರೂ ಖಾಸಗಿ ವಾಹನಗಳ ಸಂಚಾರ ಸುಧಾರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ಕಣಿವೆ ರಾಜ್ಯದಲ್ಲಿ ನಡೆಸಬಹುದಾದ ಅಭಿವೃದ್ಧಿ ಕಾರ್ಯದ ಬಗ್ಗೆ ಪರಾಮರ್ಶೆ ನಡೆಸಲು ಆಗಸ್ಟ್ 27-28ರಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಉನ್ನತ ಅಧಿಕಾರಿಗಳ ತಂಡ ಭೇಟಿ ನೀಡಲಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಕಣಿವೆಯ ಬಹುತೇಕ ಪ್ರದೇಶಗಳಲ್ಲಿ ನಿರ್ಬಂಧ ಸಡಿಲಿಸಲಾಗಿದ್ದರೂ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭದ್ರತಾ ಪಡೆಗಳನ್ನು ಹಿಂಪಡೆದಿಲ್ಲ . ಹೆಚ್ಚಿನ ಪ್ರದೇಶಗಳಲ್ಲಿ ಸ್ಥಿರ ದೂರವಾಣಿ ಸೇವೆ(ಲ್ಯಾಂಡ್‌ಲೈನ್) ಮರುಸ್ಥಾಪಿಸಲಾಗಿದೆ. ರವಿವಾರ ಶ್ರೀನಗರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದ್ದು ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ.

ಸರಕಾರಿ ಶಾಲೆಗಳು ಆರಂಭವಾದರೂ ವಿದ್ಯಾರ್ಥಿಗಳ ಹಾಜರಾತಿ ಅತ್ಯಂತ ಕಡಿಮೆಯಾಗಿದೆ. ಖಾಸಗಿ ಶಾಲೆಗಳು ಇನ್ನೂ ಆರಂಭವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರಕಾರ ಆಗಸ್ಟ್ 5ರಂದು ರದ್ದುಗೊಳಿಸಿದಂದಿನಿಂದ ರಾಜ್ಯದಲ್ಲಿ ಮೊಬೈಲ್ ಸೇವೆ ಹಾಗೂ ಇಂಟರ್‌ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಉನ್ನತ ಮಟ್ಟದ ತಂಡವೊಂದು ಆಗಸ್ಟ್ 27-28ರಂದು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿ ನಡೆಯಬೇಕಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಲಿದೆ.

ಇಲಾಖೆಯ ಕಾರ್ಯದರ್ಶಿ ಶೈಲೇಶ್ ತಂಡದ ನೇತೃತ್ವ ವಹಿಸಲಿದ್ದಾರೆ. ಶ್ರೀನಗರ, ಕಾರ್ಗಿಲ್, ಲೇಹ್ ಮತ್ತು ಜಮ್ಮುಗೆ ಭೇಟಿ ನೀಡಿ ಅಲ್ಲಿ ಶಾಲೆ, ಕಾಲೇಜು, ಆಸ್ಪತ್ರೆಯ ಸ್ಥಾಪನೆ, ಉದ್ಯೋಗಾವಕಾಶ ಸೃಷ್ಟಿಸುವುದು ಮುಂತಾದ ವಿಷಯಗಳನ್ನು ಪರಿಶೀಲಿಸಲಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲು ಇತರ ಸಚಿವಾಲಯದ ನೆರವನ್ನೂ ಪಡೆಯಲಾಗುವುದು. ಈ ಹಿಂದೆಯೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸ್ಕಾಲರ್‌ಶಿಪ್ ಮತ್ತಿತರ ನೆರವು ಒದಗಿಸುತ್ತಿತ್ತು. ಆದರೆ ಅದು ಜನರನ್ನು ತಲುಪುತ್ತಿರಲಿಲ್ಲ ಎಂದು ಸಚಿವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News