×
Ad

ಭಾರತ ಸೇವಾದಳದಿಂದ ಹರ್ಡಿಕರ್ ಪುಣ್ಯತಿಥಿ ಆಚರಣೆ

Update: 2019-08-26 20:30 IST

ಮಂಗಳೂರು, ಆ.26: ಭಾರತ ಸೇವಾದಳದ ವತಿಯಿಂದ ಸೇವಾದಳದ ಸಂಸ್ಥಾಪಕ ಡಾ.ನಾರಾಯಣ್ ಸುಬ್ಬರಾವ್ ಹರ್ಡಿಕರ್‌ರ 44ನೇ ಪುಣ್ಯತಿಥಿಯನ್ನು ನಗರದ ಕಾಪಿಕಾಡ್‌ನಲ್ಲಿರುವ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೊಮವಾರ ಆಚರಿಸಲಾಯಿತು.

ಶಾಲೆಯ ಸೇವಾದಳದ ವಿದ್ಯಾರ್ಥಿಗಳಲ್ಲದೆ ಯೆಯ್ಯಾಡಿಯ ರಾಮಾಶ್ರಮ ಅನುದಾನಿತ ಶಾಲೆ ಹಾಗೂ ಮುಲ್ಲಕಾಡಿನ ಜಿಪಂ ಪ್ರಾಥಮಿಕ ಶಾಲೆಯ ಸೇವಾದಳದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಂಗಳೂರು ತಾಲೂಕು ಸೇವಾದಳದ ಅಧ್ಯಕ್ಷ ಬಿ.ಪ್ರಭಾಕರ ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿಯವರು ಮಾತನಾಡಿ ಡಾ.ಹರ್ಡಿಕರ್ ಮಹಾತ್ಮಾ ಗಾಂಧೀಜಿಯೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹೋರಾಟಕ್ಕೆ ವಿಶೇಷವಾಗಿ ಶಿಸ್ತನ್ನು ರೂಪಿಸಿದರು. ಅದರೊಂದಿಗೆ ರಾಷ್ಟ್ರೀಯತೆ, ಸದ್ಭಾವನೆ ಮತ್ತು ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಿದರು. ಅವರ ಜೀವನ ಶೈಲಿ, ಸಿದ್ಧಾಂತ ಎಲ್ಲರಿಗೂ ಮಾರ್ಗದರ್ಶನವಾಗಲಿ ಎಂದರು.

ತಾಲೂಕು ಉಪಾಧ್ಯಕ್ಷ ಉದಯ ಕುಂದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಮಾಜಿಕ ಕಾರ್ಯಕರ್ತ ಎ. ಸುರೇಶ್ ಶೆಟ್ಟಿ ಡೆಂಗ್ ರೋಗ ನಿಯಂತ್ರಣದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.

ಮಾಜಿ ಕಾರ್ಪೊರೇಟರ್‌ಗಳಾದ ಲ್ಯಾನ್ಸಿ ಲಾಟ್ ಪಿಂಟೋ, ನಿವೃತ್ತ ವಾಣಿಜ್ಯ ಅಧಿಕಾರಿ ಪದ್ಮಾಕರ್ ಭಿಡೆ, ಜಿಲ್ಲಾ ಸೇವಾದಳ ಕಾರ್ಯದರ್ಶಿ ಟಿ.ಕೆ. ಸುಧೀರ್, ರಾಜ್ಯ ಸಮಿತಿ ಸದಸ್ಯ ವಿವಿ ಪ್ರಾನ್ಸಿಸ್, ಮುಖ್ಯ ಶಿಕ್ಷಕಿ ಪಾವನಾಮ ಶಿಕ್ಷಕರಾದ ಸಿಸಿಲಿಯಾ, ಹರಿಣಾಕ್ಷಿ, ಮಂಜಪ್ಪ ಉಪಸ್ಥಿತರಿದ್ದರು. ಅರುಣಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ನಾವಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News