ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ: 1,377 ಕೋಟಿ ರೂ. ದಂಡ !
ಹೊಸದಿಲ್ಲಿ/ಪಾಟ್ನಾ, ಆ. 26: ಟಿಕೆಟ್ ರಹಿತ ಪ್ರಯಾಣಿಕರಿಂದ ರೈಲ್ವೆ ಗಳಿಸಿದ ದಂಡ ಕಳೆದ ಮೂರು ವರ್ಷಗಳಲ್ಲಿ ಸುಮಾರು ಶೇ. 31ಕ್ಕೆ ಏರಿಕೆಯಾಗಿದೆ. ಟಿಕೆಟ್ ರಹಿತ ಪ್ರಯಾಣವನ್ನು ತಡೆಯುವ ಪ್ರಯತ್ನದ ಪರಿಣಾಮವಾಗಿ ಭಾರತೀಯ ರೈಲ್ವೆ 2016ರಿಂದ 2019ರ ನಡುವೆ 1,377 ಕೋಟಿ ರೂಪಾಯಿ ದಂಡ ಗಳಿಸಿದೆ ಎಂಬುದು ಮಾಹಿತಿ ಹಕ್ಕು ಅರ್ಜಿಯಿಂದ ಬಹಿರಂಗಗೊಂಡಿದೆ.
2016-17ರ ರೈಲ್ವೆ ಹಣಕಾಸು ವರದಿ ಪರಿಶೀಲಿಸುವ ಸಂಸತ್ತಿನ ರೈಲ್ವೆ ಸಮಿತಿ, ಟಿಕೆಟ್ ರಹಿತವಾಗಿ ಪ್ರಯಾಣಿಸುವುದರಿಂದ ನಷ್ಟ ಉಂಟಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಟಿಕೆಟ್ ರಹಿತವಾಗಿ ಪ್ರಯಾಣಿಸುವವರ ವಿರುದ್ಧ ಕ್ರಮವನ್ನು ತೀವ್ರಗೊಳಿಸುವಂತೆ ಹಾಗೂ ಟಿಟಿಇಗೆ ವಾರ್ಷಿಕ ಗುರಿ ನಿಗದಿಪಡಿಸುವಂತೆ ರೈಲ್ವೆ ಮಂಡಳಿ ವಲಯ ರೈಲ್ವೆಗಳಿಗೆ ನಿರ್ದೇಶಿಸಿತ್ತು.
ಮಧ್ಯಪ್ರದೇಶದ ಮೂಲದ ಆರ್‌ಟಿಐ ಕಾರ್ಯಕರ್ತ ಸಲ್ಲಿಸಿದ ಅರ್ಜಿಗೆ ಸಿಕ್ಕಿದ ಮಾಹಿತಿ ಪ್ರಕಾರ ಟಿಕೆಟ್ ರಹಿತ ಪ್ರಯಾಣಿಕರಿಂದ 2016-17ರಲ್ಲಿ 405.30 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ. 2018-19ರಲ್ಲಿ 530.06 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ. 2018 ಎಪ್ರಿಲ್ 2018ರಿಂದ 2019 ಜನವರಿ ನಡುವೆ 8.9 ದಶಲಕ್ಷ ಟಿಕೆಟ್ ರಹಿತ ಪ್ರಯಾಣಿಕರು ಸಿಕ್ಕಿ ಬಿದ್ದು ದಂಡ ಪಾವತಿಸಿದ್ದಾರೆ ಎಂದು ಆರ್‌ಟಿಐ ಹೇಳಿದೆ.