×
Ad

ರೂರ್ಕಿ ಐಐಟಿಯಲ್ಲಿ 20 ವರ್ಷಗಳ ಬಳಿಕ ಎಂಜಿನಿಯರ್: ಪದವೀಧರರಲ್ಲದವರಿಗೆ ಎಂಬಿಎ ಪ್ರವೇಶಾವಕಾಶ

Update: 2019-08-26 20:54 IST

ರೂರ್ಕೆ (ಉತ್ತರಾಖಂಡ), ಆ. 26: ಎರಡು ದಶಕಗಳ ಬಳಿಕ ರೂರ್ಕಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ತನ್ನ ಎಂಬಿಎ ಕೋರ್ಸ್‌ಗಳಿಗೆ ಎಂಜಿನಿಯರ್ ಪದವೀಧರರಲ್ಲದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ.

 ರೂರ್ಕಿ ಐಐಟಿ ಎಂಬಿಎ ವಿಭಾಗ 1998ರಲ್ಲಿ ಆರಂಭವಾಗಿತ್ತು. ಮೊದಲ ತಂಡದಲ್ಲಿ (1998-2000) 7 ಮಂದಿ ವಿದೇಶದ ವಿದ್ಯಾರ್ಥಿಗಳು ಸೇರಿಂತೆ 57 ಮಂದಿ ವಿದ್ಯಾರ್ಥಿಗಳಿದ್ದರು ಎಂದು ವಿಶ್ವವಿದ್ಯಾನಿಲಯ ತಿಳಿಸಿದೆ. ಮೊದಲ ತಂಡದಲ್ಲಿ 25 ಮಂದಿ ಎಂಜಿನಿಯರ್‌ಗಳು ಇದ್ದರು. ಉಳಿದವರು ವಿಜ್ಞಾನ, ಮ್ಯಾನೇಜ್‌ಮೆಟ್, ವಾಣಿಜ್ಯ ಶಾಸ್ತ್ರ, ಕಲೆ ಹಾಗೂ ಔಷಧ ವಿಜ್ಞಾನ ಸೇರಿದಂತೆ ವಿವಿಧ ಹಿನ್ನೆಲೆಯಿಂದ ಬಂದವರಾಗಿದ್ದರು. 

ಹೋಟೆಲ್ ಮ್ಯಾನೇಜ್‌ಮೆಂಟ್, ಬಿಎಸ್‌ಸಿ ಕೃಷಿ, ಬಿಎಸ್‌ಸಿ ಗೃಹ ವಿಜ್ಞಾನ ಹಿನ್ನೆಲೆ ಹೊಂದಿದವರು ಕೂಡ ಇದ್ದರು ಎಂದು ಅದು ಹೇಳಿದೆ. ಆದರೆ, ಮೊದಲನೇ ತಂಡ ಹೊರಬಂದ ಬಳಿಕ ಇಂಜಿನಿಯರ್ ಪದವೀಧರರಲ್ಲದ ವಿದ್ಯಾರ್ಥಿಗಳಿಗೆ ಎಂಬಿಎ ಕೋರ್ಸ್‌ಗೆ ಪ್ರವೇಶಾತಿಯನ್ನು ನಿಲ್ಲಿಸಲಾಗಿತ್ತು ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಇಂದು ಕೈಗಾರಿಕೆಗಳು ವಿಭಿನ್ನ ಶೈಕ್ಷಣಿಕ ಹಿನ್ನೆಲೆಯ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ನಿಯೋಜಿಸುತ್ತಿರುವುದರಿಂದ ಇದು ತುಂಬಾ ಮುಖ್ಯವಾದುದು ಎಂಬುದು ನಮ್ಮ ಭಾವನೆ. ವಿಭಿನ್ನ ಶೈಕ್ಷಣಿಕ ಹಿನ್ನೆಲೆ ಇರುವ ಕೌಶಲಯುತ ಅಭ್ಯರ್ಥಿಗಳ ಬೇಡಿಕೆ ಹಾಗೂ ಲಭ್ಯವಿರುವ ಪ್ರತಿಭಾವಂತರ ನಡುವಿನ ಅಂತರವನ್ನು ಈ ನಡೆ ತುಂಬಬಹುದು ಎಂದು ಐಐಟಿ ರೂರ್ಕಿಯ ನಿರ್ದೇಶಕ ಅಜಿತ್ ಕೆ. ಚತುರ್ವೇದಿ ಹೇಳಿದ್ದಾರೆ. ಜುಲೈಯಲ್ಲಿ ಆರಂಭವಾದ ಈ ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರ್ ಪದವೀಧರರಲ್ಲದ ನಾಲ್ವರು ವಿದ್ಯಾರ್ಥಿಗಳು ಸೇರಿದ್ದಾರೆ. ಇದು ಈ ವರ್ಷದ ಒಟ್ಟು ಸಾಮರ್ಥ್ಯದ ಶೇ. 10 ಎಂದು ವಿಭಾಗದ ಹಿರಿಯ ಅಧ್ಯಾಪಕರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News