ಗ್ಯಾಸ್ ನೆಟ್‌ವರ್ಕ್ ವಿಸ್ತರಣೆಗೆ 1.2 ಲಕ್ಷ ಕೋಟಿ ಮೊತ್ತದ ಯೋಜನೆ: ಧರ್ಮೇಂದ್ರ ಪ್ರಧಾನ್

Update: 2019-08-26 15:36 GMT

ಹೊಸದಿಲ್ಲಿ, ಆ.26: ಪೈಪ್‌ಲೈನ್ ಮೂಲಕ ಮನೆಗಳಿಗೆ ಅಡುಗೆ ಅನಿಲ ಪೂರೈಸುವ ಗ್ಯಾಸ್ ಸಂಪರ್ಕ ಜಾಲದಲ್ಲಿ ದೇಶದ 300 ಜಿಲ್ಲೆಗಳ ಪ್ರಮುಖ ನಗರಗಳನ್ನು ಸೇರ್ಪಡೆಗೊಳಿಸಲು 1.2 ಲಕ್ಷ ಕೋಟಿ ರೂ. ಮೊತ್ತವನ್ನು ನಿಗದಿಗೊಳಿಸಲಾಗಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಸಿಎನ್‌ಜಿ (ಮಿಥೇನ್‌ಯುಕ್ತ ನೈಸರ್ಗಿಕ ಅನಿಲ) ವಿತರಿಸುವ 136 ಡೀಲರ್‌ಗಳಿಗೆ ಲೈಸೆನ್ಸ್ ನೀಡಲಾಗಿದೆ. ಈ ಮೂಲಕ ದೇಶದ ಜನಸಂಖ್ಯೆಯ ಶೇ.70ರಷ್ಟನ್ನು ಗ್ಯಾಸ್ ನೆಟ್‌ವರ್ಕ್‌ನಡಿ (ಪೈಪ್‌ಲೈನ್ ಮೂಲಕ ಮನೆಗೆ ಅಡುಗೆ ಅನಿಲ ಪೂರೈಕೆ) ತರುವ ಉದ್ದೇಶವಿದೆ ಎಂದವರು ಹೇಳಿದ್ದಾರೆ. ಐದು ವರ್ಷದ ಹಿಂದೆ ನಗರದಲ್ಲಿ ಅಡುಗೆ ಅನಿಲ ವಿತರಿಸುವ ಸಂಪರ್ಕ ಜಾಲ 34 ಜಿಎ(ಭೌಗೋಳಿಕ ಪ್ರದೇಶ)ಗೆ ಸೀಮಿತವಾಗಿದ್ದರೆ ಈಗ ಸುಮಾರು 406 ಜಿಲ್ಲೆಗಳಿಗೆ ವ್ಯಾಪಿಸಿರುವ 228 ಜಿಎಗಳಿವೆ. 5 ವರ್ಷದ ಹಿಂದೆ ಪರಿಸರ ಸ್ನೇಹಿ ಇಂಧನಗಳ ಚಿಲ್ಲರೆ ಮಾರಾಟ ಮಾಡುವ 938 ಸಿಎನ್‌ಜಿ ಸ್ಟೇಷನ್‌ಗಳಿದ್ದರೆ ಈಗ 1,769ಕ್ಕೆ ತಲುಪಿದೆ.

2030ರ ವೇಳೆಗೆ ಇದನ್ನು 10000ಕ್ಕೆ ವಿಸ್ತರಿಸಲಾಗುವುದು. ಈಗ ಸಿಎನ್‌ಜಿಯಿಂದ ಚಲಿಸುವ ವಾಹನಗಳ ಸಂಖ್ಯೆ 34 ಲಕ್ಷವಿದ್ದು ಇದು 2 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಪೈಪ್‌ಲೈನ್ ಮೂಲಕ ಮನೆಗೇ ಅಡುಗೆ ಅನಿಲದ ಸಂಪರ್ಕ ಇರುವ ಮನೆಗಳ ಸಂಖ್ಯೆ ಈಗ 52 ಲಕ್ಷಕ್ಕೆ ತಲುಪಿದ್ದು 2030ರ ವೇಳೆಗೆ ಇದು 5 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಸಿಟಿ ಗ್ಯಾಸ್ ಹರಾಜಿನ 9ನೇ ಸುತ್ತಿನಲ್ಲಿ 86 ಜಿಎಗಳಿಗೆ ಲೈಸೆನ್ಸ್ ನೀಡಲಾಗಿದ್ದು ಇದಕ್ಕೆ 70 ಸಾವಿರ ಕೋಟಿ ಹೂಡಿಕೆ ನಿಗದಿಯಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ನಡೆದ 10ನೇ ಸುತ್ತಿನ ಗ್ಯಾಸ್ ಹರಾಜಿನಲ್ಲಿ 50 ಜಿಎಗಳಿಗೆ ಲೈಸೆನ್ಸ್ ನೀಡಲಾಗಿದ್ದು 50 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು ಎಂದರು.

  2014ರಲ್ಲಿ ಜನಸಂಖ್ಯೆಯ ಶೇ.20ರಷ್ಟು ಪ್ರಮಾಣ ನಗರ ಅಡುಗೆ ಅನಿಲ ಪೂರೈಕೆ ವ್ಯವಸ್ಥೆಯ ವ್ಯಾಪ್ತಿಯಡಿಯಲ್ಲಿದ್ದರೆ, ಈ ವರ್ಷದ ಮಾರ್ಚ್ ಬಳಿಕ ಇದು ಶೇ.70ಕ್ಕೆ ಹೆಚ್ಚಲಿದೆ. ಶುದ್ಧ ಮತ್ತು ಪರಿಸರ ಸ್ನೇಹಿ ಇಂಧನವಾಗಿರುವ ನೈಸರ್ಗಿಕ ಅನಿಲವನ್ನು ಈಗಿರುವ ಕಲ್ಲಿದ್ದಲು ಮತ್ತು ದ್ರವ ಇಂಧನಕ್ಕೆ ಪರ್ಯಾಯವಾಗಿ ಬಳಸುವ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವಿದೆ. ಈಗ ದೇಶದಲ್ಲಿ ನೈಸರ್ಗಿಕ ಅನಿಲ ಬಳಕೆಯ ಪ್ರಮಾಣ ಶೇ.6.2ರಷ್ಟಿದ್ದು 2030ರ ವೇಳೆಗೆ ಇದನ್ನು ಶೇ.15ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

  

ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ 9 ನಗರಗಳಲ್ಲಿ ಸಿಎನ್‌ಜಿಯ ಚಿಲ್ಲರೆ ಮಾರಾಟದ ಬಿಡ್ ಅನ್ನು ಎಚ್‌ಪಿಸಿಎಲ್ ಪಡೆದಿದೆ. ಐಒಸಿ ಬಿಹಾರ ಮತ್ತು ಜಾರ್ಖಂಡ್‌ನ 9 ನಗರಗಳ ಬಿಡ್ ಪಡೆದಿದೆ. ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದ 9 ನಗರಗಳ ಬಿಡ್ ಅನ್ನು ಎಲ್‌ಎನ್‌ಜಿ ಮಾರಾಟ ಸಂಸ್ಥೆಗಳ ಒಕ್ಕೂಟ ಮತ್ತು ಮನಿಲಾದ ಅಟ್ಲಾಂಟಿಕ್ ಗಲ್ಫ್ ಮತ್ತು ಪೆಸಿಫಿಕ್ ಕಂಪೆನಿ ಪಡೆದಿದೆ. ಗೈಲ್ ಇಂಡಿಯಾ 4, ಇಂದ್ರಪ್ರಸ್ತ ಗ್ಯಾಸ್ ಲಿ. ಹಾಗೂ ಟೊರೆಂಟ್ ಗ್ಯಾಸ್ ತಲಾ 3, ಅದಾನಿ ಗ್ಯಾಸ್ ಹಾಗೂ ಭಾರತ್ ಗ್ಯಾಸ್ ತಲಾ 2 ನಗರಗಳ ಬಿಡ್ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News