ಶ್ರೀನಗರಕ್ಕೆ ತೆರಳಿದ್ದ ವಿಪಕ್ಷ ನಾಯಕರ ವಿರುದ್ಧ ಮಾಯಾವತಿ ಆಕ್ರೋಶ
ಹೊಸದಿಲ್ಲಿ,ಆ.26: ಜಮ್ಮು ಮತ್ತು ಕಾಶ್ಮೀರಕ್ಕೆ ಅನುಮತಿಯಿಲ್ಲದೆ ತೆರಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ನಾಯಕರನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ, ವಿರೋಧ ಪಕ್ಷದ ನಾಯಕರು ಶ್ರೀನಗರಕ್ಕೆ ಭೇಟಿ ನೀಡಲು ಪ್ರಯತ್ನಿಸುವ ಮೂಲಕ ಕೇಂದ್ರ ಸರಕಾರಕ್ಕೆ ರಾಜಕೀಯ ಮಾಡಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಶನಿವಾರ ಶ್ರೀನಗರಕ್ಕೆ ಭೇಟಿ ನೀಡಲು ಯತ್ನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರ ವಿರೋಧ ಪಕ್ಷಗಳ ನಾಯಕರನ್ನು ವಿಮಾನ ನಿಲ್ದಾಣದಿಂದಲೇ ವಾಪಸ್ ಕಳುಹಿಸಲಾಗಿತ್ತು. ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಾಯಕರು ಅನುಮತಿಯಿಲ್ಲದೆ ಕಾಶ್ಮೀರಕ್ಕೆ ಭೇಟಿ ನೀಡಲು ಯತ್ನಿಸುವ ಮೂಲಕ ಕೇಂದ್ರ ಮತ್ತು ರಾಜ್ಯಪಾಲರಿಗೆ ರಾಜಕೀಯ ಮಾಡಲು ಅವಕಾಶ ನೀಡಿದ್ದಾರೆ ಎಂದು ಅನಿಸುವುದಿಲ್ಲವೇ? ಎಂದು ಬಿಎಸ್‌ಪಿ ವರಿಷ್ಠೆ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಅವರು ಸ್ವಲ್ಪ ಮೊದಲೇ ಯೋಚಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮಾಯಾವತಿ ಅಭಿಪ್ರಾಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವುದನ್ನು ಬಿಎಸ್‌ಪಿ ಬೆಂಬಲಿಸುತ್ತದೆ. ಯಾಕೆಂದರೆ ನಮ್ಮ ಪಕ್ಷದ ಆದರ್ಶ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಅದರ ವಿರುದ್ಧವಾಗಿದ್ದರು. ಅವರು ಏಕತೆ, ಸಮಾನತೆ ಮತ್ತು ದೇಶದ ಸಮಗ್ರತೆಯನ್ನು ಬೆಂಬಲಿಸುತ್ತಿದ್ದರು. ಹಾಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರತ್ಯೇಕ ನಿಬಂಧನೆ 370ನೇ ವಿಧಿಯನ್ನು ವಿರೋಧಿಸುತ್ತಿದ್ದರು ಎಂದು ಮಾಯಾವತಿ ತಿಳಿಸಿದ್ದಾರೆ.
ಆದರೆ ಸಂವಿಧಾನ ಅನುಷ್ಠಾನಗೊಂಡ ಸುಮಾರು 69 ವರ್ಷಗಳ ನಂತರ 370ನೇ ವಿಧಿ ರದ್ದಗೊಳಿಸಿರುವ ಕಾರಣ ಪರಿಸ್ಥಿತಿ ಸಹಜತೆಗೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ನ್ಯಾಯಾಲಯವೇ ಒಪ್ಪಿಕೊಂಡಿರುವಂತೆ ಸ್ವಲ್ಪ ಸಮಯ ಕಾದು ನೋಡುವುದು ಉತ್ತಮ ಎಂದು ಮಾಯಾವತಿ ಅಭಿಪ್ರಾಯಿಸಿದ್ದಾರೆ.