ಮಳೆಗೆ ಮನೆ ಹಾನಿ: ಪರಿಹಾರದ ಮೊತ್ತ ವಿತರಣೆ
ಬ್ರಹ್ಮಾವರ, ಆ.26: ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ ಪೆಜಮಂಗೂರು ಎಂಬಲ್ಲಿ ಭಾರೀ ಮಳೆಯಿಂದ ಮನೆ ಸಂಪೂರ್ಣ ಹಾನಿಗೊಂಡ ಪೊಮ್ಮ ಶೇರಿಗಾರ್ತಿ ಎಂಬವರಿಗೆ ಮೊದಲ ಕಂತಿನ ಪರಿಹಾರ ಮೊತ್ತ 95ಸಾವಿರ ರೂ. ವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಹಸ್ತಾಂತರಿಸಿದರು.
ಮಳೆಯಿಂದ ಮನೆ ಕಳೆದುಕೊಂಡವರಿಗೆ ಮುಖ್ಯಮಂತ್ರಿ ಐದು ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದು, ಇದರ ಮೊದಲ ಕಂತಿನ ಹಣವನ್ನು ಶೀಘ್ರ ಗತಿಯಲ್ಲಿ ವರದಿ ತಯಾರಿಸಿ ನೀಡಲಾಗಿದೆ. ಮುಂದಿನ ಕಂತಿನ ಹಣವನ್ನು ಶೀಘ್ರದಲ್ಲಿ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಘುಪತಿ ಭಟ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷೆ ಆಶಾಲತಾ, ಸದಸ್ಯರಾದ ವಸಂತ ಸೇರ್ವೆಗಾರ್, ಜಯಂತ್ ಪೂಜಾರಿ, ಹಿರಿಯರಾದ ಕೊಕ್ಕರ್ಣೆ ಶಂಭು ಮಾಸ್ಟರ್, ಸಂತೋಷ್ ಕುಮಾರ್ ಸೂರಲ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ್ ಭಟ್, ಪ್ರಮುಖರಾದ ಸದಾನಂದ ಸೂರಲ್, ಉದಯ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.