ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ: 2ನೇ ಹಂತದ ತನಿಖೆ ಆರಂಭ
ಮಂಗಳೂರು, ಆ. 26: ಕೆಫೆ ಕಾಫಿ ಡೇ ಮಾಲಕ, ಉದ್ಯಮಿ ಸಿದ್ಧಾರ್ಥ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದೆ. ಇನ್ನು ಎರಡನೇ ಹಂತದ ತನಿಖೆ ಆರಂಭಿಸಲು ಪ್ರಕರಣದ ತನಿಖಾಧಿಕಾರಿಗಳು ಮುಂದಾಗಿದ್ದಾರೆ.
ಪ್ರಕರಣದ ಎರಡನೇ ಹಂತದ ತನಿಖೆಯಲ್ಲಿ ‘ಸಿದ್ಧಾರ್ಥ ಆತ್ಮಹತ್ಯೆಗೆ ಏನು ಕಾರಣ’ ಎನ್ನುವುದರ ಬಗ್ಗೆ ತನಿಖೆ ನಡೆಯಲಿದೆ. ಎಫ್‌ಎಸ್‌ಎಲ್ ವರದಿ ಫೋರೇನ್ಸಿಕ್ ತಜ್ಞರಿಂದ ಪ್ರಕರಣದ ತನಿಖಾಧಿಕಾರಿಗೆ ಶುಕ್ರವಾರ ಸಲ್ಲಿಕೆಯಾಗಿತ್ತು. ಈ ವರದಿಯಲ್ಲಿ ಸಿದ್ಧಾರ್ಥ ‘ಆತ್ಮಹತ್ಯೆ ಮಾಡಿಕೊಂಡಿರುವುದು’ ಎಂದು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ತನಿಖೆ ನಡೆಯಲಿದೆ.
ಬಹಳಷ್ಟು ಕುತೂಹಲ ಕೆರಳಿಸಿದ್ದ ಸಿದ್ಧಾರ್ಥ ಕೈಬರಹದ ಸಾಚಾತನದ ಪರೀಕ್ಷಾ ವರದಿ ಕೂಡ ತನಿಖಾಧಿಕಾರಿಗಳ ಕೈಸೇರಿದೆ. ಇದರಿಂದಾಗಿ ಈಗ ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖಾಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದ್ಯಮಿ ಸಿದ್ಧಾರ್ಥನಿಗೆ ಅವರ ಕುಟುಂಬದ ಜೊತೆಗಿನ ಒಡನಾಟ, ಸಿದ್ಧಾರ್ಥನ ವಹಿವಾಟಿನ ವಿವರವನ್ನು ತನಿಖಾ ತಂಡ ಸಂಗ್ರಹಿಸಲಿದೆ. ಸಿದ್ಧಾರ್ಥ ಹೊಂದಿದ್ದ ಸಾಲ, ಶೇರುಗಳ ವಹಿವಾಟು, ಬ್ಯಾಂಕ್ ಖಾತೆಗಳ ವಿವರ, ಆರ್ಥಿಕ ಸಲಹೆಗಾರರ ಸಲಹೆ, ಅಲ್ಲದೆ ಇತರ ವ್ಯವಹಾರಗಳ ಬಗ್ಗೆ ವಿಸ್ತೃತ ತನಿಖೆ ನಡೆಸಲಿದೆ.
ಆದಾಯ ತೆರಿಗೆ ಇಲಾಖೆಯ ವಿಭಾಗದಿಂದ ಸಿದ್ಧಾರ್ಥಗೆ ನೀಡಲಾದ ನೋಟಿಸ್‌ಗಳು, ಐಟಿ ಅಧಿಕಾರಿಗಳಿಂದ ಒತ್ತಡ ಇತ್ತೇ ? ಐಟಿ ಅಧಿಕಾರಿಗಳಿಗೆ ಸಿದ್ಧಾರ್ಥ ಸೂಕ್ತವಾಗಿ ಉತ್ತರ ನೀಡುತ್ತಿದ್ದರೇ ಎಂಬಿತ್ಯಾದಿ ಮಾಹಿತಿಗಳನ್ನು ತನಿಖಾ ತಂಡ ತನಿಖೆಗೆ ಒಳಪಡಿಸಲಿದೆ.
ಸಿದ್ಧಾರ್ಥನೊಂದಿಗೆ ಒಡನಾಟ ಹೊಂದಿದವರನ್ನೂ ತನಿಖೆ ನಡೆಸಲಿದ್ದು, ಈ ಮೂಲಕ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಳ್ಳಲು ಉಂಟಾದ ನಿಖರ ಕಾರಣ ಏನು ಎಂಬುದನ್ನು ಪತ್ತೆ ಮಾಡಲು ತನಿಖಾ ತಂಡ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಜು.29ರಂದು ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಸಿದ್ಧಾರ್ಥ ಕಣ್ಮರೆಯಾಗಿದ್ದರು. ಅವರ ಶವ ಎರಡು ದಿನಗಳ ಬಳಿಕ ನಾಲ್ಕು ಕಿ.ಮೀ. ದೂರದ ಹೊಯ್ಗೆ ಬಜಾರ್ ಎಂಬಲ್ಲಿ ಪತ್ತೆಯಾಗಿತ್ತು. ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಎಸಿಪಿ ಕೋದಂಡರಾಮ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.