ವಿದ್ಯಾರ್ಥಿಗಳಿಗೆ ಸ್ಚಚ್ಛತೆಯ ಜಾಗೃತಿ ಮೂಡಿಸಿ: ದಿನಕರ ಬಾಬು
ಉಡುಪಿ, ಆ.26: ಸ್ವಚ್ಛತೆ ಕುರಿತಂತೆ ಜಿಲ್ಲೆಯಲ್ಲಿ ಉತ್ತಮ ಕೆಲಸಗಳಾಗಿದ್ದು, ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮಕ್ಕಳಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಿ ಸ್ವಚ್ಛತೆಯ ಜಾಗೃತಿ ಮೂಡಿಸಿದಲ್ಲಿ ಜಿಲ್ಲೆಗೆ ಉತ್ತಮ ಸಂದೇಶ ರವಾನಿಸಿದಂತಾಗುತ್ತದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಸೋಮವಾರ ಜಿಲ್ಲಾಪಂಚಾಯತ್ ಉಡುಪಿ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ವತಿಯಿಂದ ಸ್ವಚ್ಛ ಮೇವ ಜಯತೇ ಆಂದೋಲನದ ಅಂಗವಾಗಿ ಸ್ವಚ್ಛತೆ, ಜಲ ಸಂರಕ್ಷಣೆ, ಪರಿಸರ ಸಂರಕ್ಷಣಾ ಜನಜಾಗೃತಿ ಸಲುವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾಮಟ್ಟದ ಸ್ವಚ್ಛತಾ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ತನ್ನ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿ ಇತರರಿಗೆ ಮಾದರಿಯಾದ ಕೊಪ್ಪಳದ ವಿದ್ಯಾರ್ಥಿನಿ ಮಲ್ಲಮ್ಮ ಅವರನ್ನು ಉದಾಹರಣೆಯಾಗಿರಿಸಿ ಕೊಂಡು ವಿದ್ಯಾರ್ಥಿ ಶಕ್ತಿಯನ್ನು ವಿವರಿಸಿದ ಅವರು, ತಮ್ಮ ಮನೆ ಹಾಗೂ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ಪರಿಸರ ಮಾಲಿನ್ಯವೇ ಹಲವಾರು ರೋಗ ರುಜಿನಗಳಿಗೆ ಕಾರಣವಾಗಿದ್ದು, ಪರಿಸರ ಸ್ವಚ್ಛತೆಗೆ ಅದ್ಯತೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತಮ್ಮ ಮನೆಯನ್ನು ಮಾತ್ರ ಸ್ವಚ್ಛವಾಗಿಟ್ಟುಕೊಂಡರೆ ಸಾಲದು ಇಡೀ ಪರಿಸರವನ್ನು ಸ್ವಚ್ಛವಾಗಿಡುವ ಮನೋಭಾವ ಬೆಳೆಯಬೇಕು. ವಿದ್ಯಾರ್ಥಿಗಳು ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿ, ಪರಿಸರವನ್ನು ಸ್ವಚ್ಚವಾಗಿರಿಸುವಲ್ಲಿ ಶ್ರಮಿಸಬೇಕು ಎಂದರು.
ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳು ಮನುಕುಲಕ್ಕೆ ಮಾರಕವಾಗಿದ್ದು, ಸ್ವಚ್ಛಮೇವ ಜಯತೆ ಆಂದೋಲನವು ಸ್ವಚ್ಛತೆಯ ಅಗತ್ಯತೆ ಯನ್ನು ಹೊಂದಿದೆ. ಸ್ವಚ್ಛತೆಯನ್ನು ಕಾಪಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಹೆಗಲ ಮೇಲಿದೆ. ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ಇತರ ಜಿಲ್ಲೆಗಳಿಗೆ ಮಾದರಿಯಾಗಿದ್ದು, ಈ ನಿಟ್ಟಿನಲ್ಲಿ ನಗರ-ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಮುತು ವರ್ಜಿ ವಹಿಸಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದರು.
ಜಿಲ್ಲೆಯ ವಂಡ್ಸೆ ಘನ ದ್ರವ ತ್ಯಾಜ್ಯ ನಿರ್ವಹಣಾ ಘಟಕದ ಪ್ರೇರಣೆಯಿಂದ ಕೋಲಾರದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಆರಂಭಿಸಲಾಗಿದೆ ಎಂದ ಅವರು, ಕಸದ ಉತ್ಪತ್ತಿ ನಮ್ಮಿಂದಲೇ ಆಗುತ್ತಿರುವಾಗ ಅದರ ಲೇವಾರಿಯೂ ನಮ್ಮಿಂದಲೇ ಆಗಬೇಕಾಗಿದೆ. ಸ್ವಚ್ಚತೆಯನ್ನು ಕಾಪಾಡದಿದ್ದಲ್ಲಿ ಮುಂದಿನ ಪೀಳಿಗೆಗೆ ಸಂಕಷ್ಟ ತಪ್ಪಿದ್ದಲ್ಲ ಎಂದರು. ಯಾವುದೇ ಕಾರಣಕ್ಕೂ ಕಸವನ್ನು ಬೀದಿಗೆ ಎಸೆಯಬಾರದು, ವಿದ್ಯಾರ್ಥಿಗಳು ಸ್ವಚ್ಚತೆಯ ರಾಯಭಾರಿಗಳಾಗಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವಾಲ್ನಟ್ ನಾಲೆಡ್ಜ್ ಸೊಲ್ಯೂಶನ್ ಪ್ರೈವೇಟ್ ಲಿ. ಸಂಸ್ಥೆಯು ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದ್ದು, ಸಂಸ್ಥೆಯ ಪ್ರತಿನಿಧಿ ಅನಘಾ ಶ್ರೆಧರ್ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ 161 ಶಾಲೆಗಳ 205 ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕ ಸುಬ್ರಮಣ್ಯ ಜೋಶಿ ಉಪಸ್ಥಿತರಿದ್ದರು.
ಉಡುಪಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿಡಿಒ ಮಹೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.