ಮೋಟಾರ್ ವಾಹನ ಮಸೂದೆಯಿಂದ ಖಾಸಗಿ ಕಂಪೆನಿಗಳಿಗೆ ಲಾಭ: ಬಾಲಕೃಷ್ಣ ಶೆಟ್ಟಿ

Update: 2019-08-27 15:15 GMT

ಉಡುಪಿ, ಆ.27: ಕೇಂದ್ರ ಸರಕಾರ ಖಾಸಗಿ ಇನ್ಸುರೆನ್ಸ್, ಆಟೋ ಮೊಬೈಲ್ ಸೇರಿದಂತೆ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡುವ ಉದ್ದೇಶ ದಿಂದ ಮೋಟಾರ್ ವಾಹನ ಮಸೂದೆ -2019 ತಿದ್ದುಪಡಿಯನ್ನು ಜಾರಿಗೆ ತಂದಿದೆ. ಈ ಅವೈಜ್ಞಾನಿಕ ಮಸೂದೆಯನ್ನು ಸರಕಾರ ಕೂಡಲೇ ವಾಪಾಸ್ಸು ಪಡೆಯಬೇಕು ಎಂದು ಉಡುಪಿ ಜಿಲ್ಲಾ ಸಿಐಟಿಯು ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.

ಅವೈಜ್ಞಾನಿಕವಾಗಿರುವ ಕೇಂದ್ರ ಮೋಟಾರ್ ವಾಹನ ಮಸೂದೆ 2019 ತಿದ್ದುಪಡಿ ವಾಪಾಸಾತಿ ಹಾಗೂ ಆಟೋ ಚಾಲಕರಿಗೆ ಕಲ್ಯಾಣ ಯೋಜನೆ ಗಳನ್ನು ರೂಪಿಸುವಂತೆ ಒತ್ತಾಯಿಸಿ ಕುಂದಾಪುರ ಹಾಗೂ ಉಡುಪಿ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ(ಸಿಐಟಿಯು) ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಈ ಕಾಯಿದೆಯನ್ನು ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿಗೆ ತರಬಾರದು. ಸರಕಾರ 15ವರ್ಷಗಳ ಹಳೆಯ ಆಟೋಗಳನ್ನು ರದ್ದು ಪಡಿಸುತ್ತಿದ್ದು, ಆದುದರಿಂದ ಹಳೆಯ ಆಟೋಗಳಿಗೆ ಕಂಪೆನಿಗಳಿಂದ ದರ ನಿಗದಿಪಡಿಸಬೇಕು. ಅಲ್ಲದೆ ಸರಕಾರ ಪ್ರೋತ್ಸಾಹ ಧನ 50ಸಾವಿರ ರೂ. ನೀಡ ಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಆಟೋ ಚಾಲಕರಿಗೆ ಮನೆ ನಿರ್ಮಿಸಿಕೊಡಬೇಕು. ಚಾಲನ ಪತ್ರ ನೀಡುವ ಸಂದರ್ಭದಲ್ಲಿ ವಿದ್ಯಾರ್ಹತೆ ಕಡ್ಡಾಯಗೊಳಿಸಿರುವುದನ್ನು ವಾಪಾಸ್ಸು ಪಡೆಯ ಬೇಕು. ವಿಮಾ ಪ್ರಿಮೀಯಂ ದರ ಕಡಿಮೆ ಮಾಡಬೇಕು. ಆಟೋ ಚಾಲಕರಿಗೆ ಭವಿಷ್ಯ ನಿಧಿ ಹಾಗೂ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣ ಭದ್ರತಾ ಮಂಡಳಿ ರಚನೆ ಹಾಗೂ ಕಲ್ಯಾಣ ಯೋಜನೆ ಮತ್ತು ಇಎಸ್‌ಐ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದರು.

ಧರಣಿಯಲ್ಲಿ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಲಕ್ಷ್ಮಣ್ ಬರಕಟ್ಟೆ, ಕಾರ್ಯದರ್ಶಿ ರಾಜು ದೇವಾಡಿಗ, ಉಡುಪಿ ತಾಲೂಕು ಅಧ್ಯಕ್ಷ ರಾಜು ಸಾಲ್ಯಾನ್, ಕಾರ್ಯದರ್ಶಿ ರತ್ನಾಕರ ಮರಕಾಲ, ಪದಾಧಿಕಾರಿಗಳಾದ ಸದಾಶಿವ ಪೂಜಾರಿ, ರಮೇಶ್ ದೇವಾಡಿಗ, ಚಂದ್ರ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ಕುಂದಾಪುರ ತಾಲೂಕು ಸಂಚಾಲಕ ಎಚ್.ನರಸಿಂಹ, ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ, ತಾಲೂಕು ಕಾರ್ಯದರ್ಶಿ ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News