ಪಡಿತರ ಚೀಟಿಯ ಮುಗಿಯದ ಗೋಳು; ಜಿ.ಪಂ. ಸದಸ್ಯರ ಆಕ್ರೋಶ
ಉಡುಪಿ, ಆ.27: ಜಿಲ್ಲೆಯಲ್ಲಿ ಕಳೆದ ಆರೇಳು ತಿಂಗಳುಗಳಿಂದ ಬಡಜನರ ಮುಗಿಯದ ಗೋಳಾಗಿರುವ ರೇಶನ್ ಕಾರ್ಡ್ ಸಮಸ್ಯೆ ಇಂದಿಲ್ಲಿ ನಡೆದ ಉಡುಪಿ ಜಿಪಂನ 17ನೇ ಸಾಮಾನ್ಯ ಸಭೆಯಲ್ಲಿ ಮತ್ತೆ ಸದಸ್ಯರ ಟೀಕೆಗೆ ಆಹಾರವಾಯಿತು. ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸದಸ್ಯರು ಪಕ್ಷಾತೀತವಾಗಿ ಒತ್ತಾಯಿಸಿದರು.
ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಮಣಿಪಾಲದಲ್ಲಿರುವ ಉಡುಪಿ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಯಲ್ಲಿ ಕಾಂಗ್ರೆಸ್‌ನ ಜನಾರ್ದನ ತೋನ್ಸೆ ಅವರು ವಿಷಯ ಪ್ರಸ್ತಾಪಿಸಿ ಕಳೆದ 6-7 ತಿಂಗಳಿನಿಂದ ಉಡುಪಿ ತಾಲೂಕಿನಲ್ಲಿ ಒಂದೇ ಒಂದು ಪಡಿತರ ಚೀಟಿ ವಿತರಣೆಯಾಗದೇ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದೆ. ಇಲಾಖೆ ಈ ಬಗ್ಗೆ ಹಾರಿಕೆಯ ಉತ್ತರವನ್ನು ನೀಡದೇ, ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದರು.
ಕಳೆದ 6-7 ತಿಂಗಳಿನಿಂದ ಒಂದೇ ಒಂದು ರೇಶನ್ ಕಾರ್ಡ್ ವಿತರಣೆ ಯಾಗಿಲ್ಲ. ಬಿಪಿಎಲ್ ಮಂದಿಯ ಪಡಿತರಕ್ಕೆ ಹಾಗೂ ಅವರಿಗೆ ವಿವಿಧ ಸೌಲಭ್ಯ ಗಳನ್ನು ಪಡೆಯಲು ಇದು ಅತ್ಯಗತ್ಯ. ದಿನನಿತ್ಯವೆಂಬಂತೆ ಜನರು ಪಡಿತರ ಚೀಟಿಗಾಗಿ ನಮ್ಮನ್ನು ಪ್ರಶ್ನಿಸುತಿದ್ದಾರೆ. ಅಧಿಕಾರಿಗಳ ಮಾತನ್ನು ನಂಬಿ ಕಚೇರಿ ಯಿಂದ ಕಚೇರಿಗೆ ಅಲೆಯುತಿದ್ದಾರೆ. ಆದರೆ ಅವರು ತಾತ್ಕಾಲಿಕ ಕಾರ್ಡನ್ನೂ ನೀಡುತ್ತಿಲ್ಲ. ಪೋಸ್ಟ್‌ನಲ್ಲಿ ಕಳುಹಿಸುತ್ತೇವೆ ಎಂಬ ಉತ್ತರ ಪಡೆದು ಪ್ರತಿದಿನ ಪೋಸ್ಟ್‌ಮ್ಯಾನ್‌ನ್ನು ಕಾಯುತಿದ್ದಾರೆ ಎಂದು ಆಕ್ರೋಶಭರಿತರಾಗಿ ನುಡಿದರು.
ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಪ್ರಭಾರ ಅಧಿಕಾರಿ ಕುಸುಮಾಧರ್ ಮಾತನಾಡಿ, ಜಿಲ್ಲೆಯಲ್ಲಿ 4771 ಪಡಿತರ ಚೀಟಿ ವಿತರಣೆಗೆ ಮಾರ್ಚ್ 2019ವರೆಗೆ ಬಾಕಿ ಇದೆ. ಅಲ್ಲದೇ 6820 ಹೊಸದಾಗಿ ಅರ್ಜಿ ಸಲ್ಲಿಸಿದ್ದು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಹೊರಗುತ್ತಿಗೆ ಮೇಲೆ ಸಿಬ್ಬಂದಿ ನೇಮಿಸಿಕೊಂಡು ಶೀಘ್ರದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಉತ್ತರವನ್ನು ಅಧಿಕಾರಿಗಳು ಮುಖ್ಯಮಂತ್ರಿಗಳು, ಜಿಲ್ಲಾ ಸಚಿವರು, ಕೆಡಿಪಿ ಸಭೆಗಳಿಗೂ ಅಕ್ಷರಶ: ನೀಡುತಿದ್ದೀರಿ. ಆದರೆ ಜನರಿಗೆ ಒಂದೇ ಒಂದು ಪಡಿತರ ಚೀಟಿ ವಿತರಣೆಯಾಗಿಲ್ಲ ಎಂದು ದಿನಕರ ಬಾಬು ಗುಡುಗಿದರು. ಉಳಿದ ಸದಸ್ಯರೂ ಅವರಿಗೆ ಬೆಂಬಲವಾಗಿ ತಮ್ಮ ತಮ್ಮ ಪ್ರದೇಶಗಳ ಜನರ ಗೋಳನ್ನು ತೋಡಿಕೊಂಡರು. ಪ್ರತಾಪ್ ಹೆಗ್ಡೆ ಮಾರಾಳಿ, ಬಾಬು ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ರೇಷ್ಮಾ ಉದಯ ಶೆಟ್ಟಿ, ಉದಯ ಕೋಟ್ಯಾನ್ ಅವರೂ ವಿಷಯದ ಕುರಿತು ಮಾತನಾಡಿದರು.
ಇಲಾಖೆಯ ಅಧಿಕಾರಿಗಳು ಮೊದಲು ವಿವಿಧ ಕಾರಣಗಳನ್ನು ನೀಡುತ್ತಾ ಬಂದರೂ, ಕೊನೆಗೆ ಕಳೆದ ಚುನಾವಣಾ ನೀತಿಸಂಹಿತೆ ಘೋಷಣೆಯಾದ ಬಳಿಕ ಯಾರಿಗೂ ಪಡಿತರ ಚೀಟಿಯನ್ನು ವಿತರಿಸಲಾಗಿಲ್ಲ ಎಂಬುದನ್ನು ಸಭೆಯಲ್ಲಿ ಒಪ್ಪಿಕೊಂಡರು.
ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಕೊನೆಗೆ ಸಭೆಯಲ್ಲಿ ಉಪಸ್ಥಿತರಿದ್ದ ಕುಂದಾಪುರ ಉಪವಿಭಾಗಾಧಿಕಾರಿ ಮಧುಕೇಶ್ವರ ಮಾತನಾಡಿ, ಪಡಿತರ ಚೀಟಿ ಇರದೆ ಇದ್ದರೂ ಸಹ ತಾತ್ಕಾಲಿಕ ಕಾರ್ಡ್‌ನಲ್ಲಿ ಪಡಿತರ ಪಡೆಯಬಹುದು ಪ್ರಸ್ತುತ ಸಿದ್ಧವಿರುವ ತಾತ್ಕಾಲಿಕ 708 ಕಾರ್ಡ್‌ಗಳನ್ನು ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಿದ್ಧವಿರುವ ತಾತ್ಕಾಲಿಕ ಪಡಿತರ ಚೀಟಿಗಳನ್ನು ಸೆಪ್ಟಂಬರ್ 11ರೊಳಗೆ ಸಂಬಂಧಪಟ್ಟವರಿಗೆ ವಿತರಿಸಿ, ಆಯಾ ಜಿಪಂ ಸದಸ್ಯರಿಗೆ ಮಾಹಿತಿ ನೀಡುವಂತೆ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಸಶ್ಮಾನಭೂಮಿ ಅತಿಕ್ರಮ: ಜನರು ಯಾವುದೇ ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಿಲ್ಲ ಎಂಬುದಕ್ಕೆ ಹಾವಂಜೆಯಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಭೂ ಒತ್ತುವರಿ ಆಗುತ್ತಿರುವುದೇ ಒಳ್ಳೆಯ ಉದಾಹರಣೆ ಎಂದು ಸದಸ್ಯ ಜನಾರ್ಧನ ತೋನ್ಸೆ ಹೇಳಿದರು. ಸ್ಮಶಾನಕ್ಕೆ ಹೋಗುವ ಜಾಗ ಅತಿಕ್ರಮಣವಾಗುತಿದ್ದು ಕೂಡಲೇ ಅದನ್ನು ತೆರವುಗೊಳಿಸಿ ಎಂದು ಅವರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಮಧುಕೇಶ್ವರ್, ಕೂಡಲೇ ತಾವು ಈ ಭೂಒತ್ತುವರಿಯನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದರು. ತೆರವುಗೊಳಿಸಿದ ನಂತರ ಭೂಮಿಯನ್ನು ಗ್ರಾಪಂಗೆ ಹಸ್ತಾಂತರಿಸುವುದಾಗಿ ಹೇಳಿದ ಅವರು ಪಂಚಾಯತ್ ಭೂಮಿಯ ಸುತ್ತ ತಂತಿ ಬೇಲಿ ಹಾಕಿ ಅದಕ್ಕೆ ರಕ್ಷಣೆ ನೀಡಬೇಕು ಹಾಗೂ ಸ್ಮಶಾನಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಬೇಕು. ಇದಕ್ಕೆ ಬೇಕಾದ ಅನುದಾನಕ್ಕೆ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಬಹುದು ಎಂದರು.
ಮಜೂರು ಗ್ರಾಮ ಹೊರಗಿಡಿ: ಕಾಪು ತಾಲೂಕಿನ ನೂತನ ಪ್ರಾಧಿಕಾರದ ವ್ಯಾಪ್ತಿಯಿಂದ ಮಜೂರು ಗ್ರಾಪಂನ್ನು ಕೈಬಿಡಬೇಕೆಂದು ಶಿಲ್ಪ ಜಿ.ಸುವರ್ಣ ಒತ್ತಾಯಿಸಿದರು. ಆದರೆ ಇದರ ಬದಲಿಗೆ ಮಜೂರು ಗ್ರಾಮದೊಂದಿಗೆ ಪಕ್ಕದ ಹೆರೂರು ಮತ್ತು ಪಾದೂರು ಗ್ರಾಮಗಳನ್ನೂ ಈ ವ್ಯಾಪ್ತಿಗೆ ತರುವ ಬಗ್ಗೆ ಶಿಫಾರಸ್ಸು ಮಾಡಲಾಗಿದೆ ಎಂದವರು ದೂರಿದರು. ಗ್ರಾಮದಲ್ಲಿ ಶೇ.40ಕ್ಕಿಂತ ಹೆಚ್ಚು ಕೃಷಿಭೂಮಿ ಇದ್ದರೆ ಪ್ರಾಧಿಕಾರ ವ್ಯಾಪ್ತಿಗೆ ತರುವಂತಿಲ್ಲ. ಮಜೂರಿನಲ್ಲಿ ಶೇ.89 ಇದೆ ಎಂದರು.
ಇದಕ್ಕೆ ಉತ್ತರಿಸಿದ ಮಧುಕೇಶ್ವರ್, ಹೊಸ ತಾಲೂಕಾಗಿರುವ ಕಾಪುವಿಗೆ ಹೊಸದಾಗಿ ಪ್ರಾಧಿಕಾರವನ್ನು ರೂಪಿಸಲಾಗಿದೆ. ನಗರದ ವ್ಯವಸ್ಥಿತ ಬೆಳವಣಿಗೆ ಗಾಗಿ ಇದನ್ನು ರಚಿಸಲಾಗಿದೆ. ಕಾಪುವಿಗೆ ಸಮೀಪವಿರುವುದರಿಂದ ಅದನ್ನು ಸೇರಿಸಲಾಗಿದೆ. ಇದರಿಂದ ಮಜೂರಿಗೆ ತುಂಬಾ ಲಾಭವಿದೆ ಎಂದರು.
ಮಹಿಳಾ ವಾರ್ಡನ್ ಬೇಕು: ಜಿಲ್ಲೆಯ ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಪುರುಷ ವಾರ್ಡನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಬಾಲಕಿಯರ ಹಾಸ್ಟೆಲ್ ಗಳಲ್ಲಿ ಮಹಿಳಾ ವಾರ್ಡನ್‌ಗಳನ್ನು ಮಾತ್ರ ನೇಮಿಸುವಂತೆ ಹಾಗೂ ಕೆಲ ಬಾಲಕರ ಹಾಸ್ಟೆಲ್‌ನಲ್ಲಿರುವ ಮಹಿಳಾ ವಾರ್ಡನ್‌ಗಳನ್ನು ಬಾಲಕಿ ಯರ ಹಾಸ್ಟೆಲ್‌ಗೆ ವರ್ಗಾಯಿಸುವಂತೆ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಆಗ್ರಹಿಸಿದರು. ಜಿಲ್ಲೆಯಲ್ಲಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸದಸ್ಯೆ ಗೀತಾಂಜಲಿ ಸುವರ್ಣ ಹೇಳಿದರು.
ಜಿಲ್ಲೆಯ ಎಲ್ಲಾ ಅಂಗನವಾಡಿಗಳ ಹೆಸರಲ್ಲಿ ಆರ್‌ಟಿಸಿ ಪಡೆಯುವ ಬಗ್ಗೆ, ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಕಾರ್ಯಾದೇಶ ನೀಡಲು ವಿಳಂಬವಾಗುತ್ತಿರುವ ಬಗ್ಗೆ, ಇರ್ವತ್ತೂರು-ಸಾಣೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಹೆಚ್ಚಿನ ಸಂಖ್ಯೆಯ ಅಪಘಾತಗಳಾಗುತ್ತಿದ್ದು, ಇದನ್ನು ತಡೆಯಲು ಮತ್ತು ರಸ್ತೆ ಬದಿಯಲ್ಲಿನ ಅಪಾಯಕಾರಿ ಮರಗಳನ್ನು ತೆಗೆಯುವ ಬಗ್ಗೆ ಸಭೆಯಲ್ಲಿ ವಿಸ್ಕೃತ ಚರ್ಚೆ ನಡೆಯಿತು.
ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್ ಕೋಟ್ಯಾನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್,ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಯೋಜನಾ ನಿರ್ದೇಶಕ ಮಧುಕರ್ ಉಪಸ್ಥಿತರಿದ್ದರು.
ಗೇರುಬೀಜ ಕಾರ್ಖಾನೆಗಳಲ್ಲಿ ಕಾನೂನು ಶಿಬಿರ
ಗೇರುಬೀಜ ಕಾರ್ಖಾನೆಗಳಲ್ಲಿ ಕಾನೂನು ಶಿಬಿರ ಜಿಲ್ಲೆಯಲ್ಲಿರುವ ಗೇರುಬೀಜ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಮಹಿಳೆಯರೇ ಅಧಿಕವಿರುವ ಬಡ ಕಾರ್ಮಿಕರಿಗೆ ಅವರ ಪಿಎಫ್ ಹಣ ಪಡೆಯಲು ಕಾನೂನಿನ ತೊಡಕು ಎದುರಾಗಿದ್ದು, ಈ ಬಗ್ಗೆ ಅಗತ್ಯಕ್ರಮ ಕೈಗೊಳ್ಳುವಂತೆ ಸದಸ್ಯರಾದ ಜ್ಯೋತಿ ಹರೀಶ್, ಬಾಬು ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ ಒತ್ತಾಯಿಸಿದರು.
ಗೇರುಬೀಜ ಕಾರ್ಖಾನೆಗಳಲ್ಲಿ ಪಿಎಫ್ ಮಾಡುವಾಗ ಆಧಾರ ಕಾರ್ಡ್ ಕಡ್ಡಾಯವಿರಲಿಲ್ಲ. ಆದರೆ ಈಗ ಹಿಂಪಡೆಯುವಾಗ ಆಧಾರ ಕಡ್ಡಾಯ ವಾಗಿದೆ. ಇದರಲ್ಲಿ ಅವರ ಜನ್ಮದಿನಾಂಕ, ಹೆಸರು ತಾಳೆಯಾಗುತ್ತಿಲ್ಲ. ಶಾಲೆಗೆ ಹೋಗದ ಇವರಿಗೆ ಜನ್ಮದಿನದ ದಾಖಲೆ ಪಡೆಯುವ ಯಾವ ಮಾರ್ಗವೂ ಇಲ್ಲ. ಹೀಗಾಗಿ ಅವರಿಗೆ ಅವರ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಕುಂದಾಪುರ ಉಪವಿಭಾಗಾಧಿಕಾರಿ, ಯಾವುದೇ ದಾಖಲೆ ಇಲ್ಲದೆ ಇದ್ದರೆ ಹುಟ್ಟಿದ ದಿನಾಂಕ ಪಡೆಯಲು ಕೆಲವೊಂದು ನಿಗದಿತ ದಾಖಲೆಗಳಿದ್ದು, ಅದನ್ನು ಗಜೆಟೆಡ್ ಅಧಿಕಾರಿ ದೃಢೀಕರಿಸಿ,ಸಿವಿಲ್ ಕೋರ್ಟ್‌ನಲ್ಲಿ ಹುಟ್ಟಿದ ದಿನಾಂಕ ಲಭ್ಯವಿಲ್ಲವೆಂದು ಬರೆಸಿಕೊಂಡು ಬರಬೇಕು. ಸಿವಿಲ್ ಕೋರ್ಟ್ ನೀಡಿದ ದೃಢೀಕರಣ ಶಾಶ್ವತ ದಾಖಲೆಯಾಗುತ್ತದೆ ಎಂದರು.
ಇದಕ್ಕಾಗಿ ಗ್ರಾಪಂಗಳ ಮೂಲಕ ಪ್ರತಿ ಗೇರುಬೀಜ ಕಾರ್ಖಾನೆಗಳಲ್ಲಿ ಅಲ್ಲಿನ ಕಾರ್ಮಿಕರಿಗೆ ಕಾನೂನು ಅರಿವು ಶಿಬಿರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಮೂಲಕ ಏರ್ಪಡಿಸಿ ಅಗತ್ಯ ನೆರವು ಒದಗಿಸುವುದಾಗಿ ಹೇಳಿದರು.