×
Ad

ಮಣಿಪಾಲದ ಸ್ವರೂಪ್ ಶೆಟ್ಟಿ ವಂಚನೆ ಪ್ರಕರಣ: ಪೊಲೀಸ್, ರೌಡಿಗಳ ಹೆಸರಿನಲ್ಲಿ ಮಿತ್ರರಿಂದಲೇ ಹಣ ಲೂಟಿಗೈದ ವಂಚಕ !

Update: 2019-08-27 21:21 IST
ಸ್ವರೂಪ್ ಶೆಟ್ಟಿ

ಉಡುಪಿ, ಆ.27: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರೆ ಪೊಲೀಸರಿಂದ ಬಂಧಿತನಾಗಿರುವ ಮಣಿಪಾಲ ಅನಂತನಗರದ ಸ್ವರೂಪ್ ಶೆಟ್ಟಿ (23) ತನ್ನ ಗೆಳೆಯರ ದೌರ್ಬಲ್ಯಗಳನ್ನು ದುರ್ಬಳಕೆ ಮಾಡಿಕೊಂಡು ಪೊಲೀಸರ ಹಾಗೂ ರೌಡಿಗಳ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ಲೂಟಿಗೈಯುತ್ತಿದ್ದ ವಿಚಾರ ಇದೀಗ ತನಿಖೆಯಿಂದ ಬಹಿರಂಗಗೊಂಡಿದೆ.

ಸ್ವರೂಪ್ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಿದಂತೆ ಆತನ ಒಂದೊಂದೇ ವಂಚನೆ ಪ್ರಕರಣಗಳು ಪೊಲೀಸರನ್ನು ಬೆಚ್ಚಿ ಬೀಳಿಸಿವೆ. ತನ್ನ ಮಿತ್ರರಾದ ಉಡುಪಿ ಕಾಡಬೆಟ್ಟುವಿನ ಆದಿತ್ಯ ಶೆಟ್ಟಿ, ಪಡುಬಿದ್ರೆ ಪಾದೆಬೆಟ್ಟುವಿನ ಅಭಿಲಾಶ್ ಆಚಾರ್ಯ ಹಾಗೂ ಆಕರ್ಷ್ ಮಾತ್ರವಲ್ಲದೆ ಕಾರ್ಕಳ ಗ್ರಾಮಾಂತರ ಎಸ್ಸೈ ಅವರನ್ನೇ ಯಾಮಾರಿಸಿ ಹಣ ಪಡೆದು ವಂಚಿಸಿದ ವಿಚಾರ ತನಿಖೆಯಿಂದ ತಿಳಿದುಬಂದಿದೆ.

ರೌಡಿ ಹೆಸರಿನಲ್ಲಿ ಲೂಟಿ

ಉಡುಪಿ ಎಂಜಿಎಂ ಕಾಲೇಜಿನಲ್ಲಿ ಪಿಯುಸಿ ಯಲ್ಲಿ ಅನುತ್ತೀರ್ಣಗೊಂಡ ಸ್ವರೂಪ್ ಶೆಟ್ಟಿ, ಬಳಿಕ ಮಣಿಪಾಲದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಕೋರ್ಸ್ ಮಾಡಿದ್ದನು. ಮುಂದೆ ಆತ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟೆಯಲ್ಲಿ ಬೈಕ್ ಬಾಡಿಗೆ ನೀಡುವ ವ್ಯವಹಾರವನ್ನು ಆರಂಭಿಸಿದ್ದನು.

ವ್ಯವಹಾರ ನಷ್ಟದಲ್ಲಿರುವುದರಿಂದ ಬೈಕ್‌ಗಳನ್ನು ಮಾರಾಟ ಮಾಡಿದರೆ ಕಮೀಷನ್ ನೀಡುವುದಾಗಿ ಸ್ವರೂಪ್, ಅಭಿಲಾಶ್‌ಗೆ ತಿಳಿಸಿದ್ದನು. ಅದರಂತೆ ಅಭಿಲಾಶ್ 7 ಬೈಕ್‌ಗಳನ್ನು ಮಾರಾಟ ಮಾಡಿದ್ದನು. ಬೈಕ್‌ಗಳ ಮೇಲೆ ಬ್ಯಾಂಕಿನಲ್ಲಿ ಸಾಲ ಬಾಕಿ ಇರುವುದರಿಂದ ಬೈಕ್ ಪಡೆದವರು ಅಭಿಲಾಶ್‌ನನ್ನು ಪೀಡಿಸುತ್ತಿದ್ದರು. ಅಲ್ಲದೆ ಇದರ ಕಮಿಷನ್ ಹಣವನ್ನು ಕೂಡ ಸ್ವರೂಪ್, ಅಭಿಲಾಶ್‌ಗೆ ನೀಡಿರಲಿಲ್ಲ.

ಈ ವಿಚಾರದಲ್ಲಿ ಅಭಿಲಾಶ್ ಸಂಬಂಧಿ ದೀಕ್ಷಿತ್, ರೌಡಿ ಮಂಜನಿಗೆ ಹೇಳುವುದಾಗಿ ಸ್ವರೂಪ್‌ಗೆ ಬೆದರಿಸಿದ್ದನು. ಇದೇ ವಿಚಾರವನ್ನು ಇಟ್ಟುಕೊಂಡು ಆಟ ಆಡಲು ಆರಂಭಿಸಿದ ಸ್ವರೂಪ್, ಮೇ 5ರಂದು ರೌಡಿ ಮಂಜ ತನ್ನ ಸಹೋದರಿಯನ್ನು ಅಪಹರಣ ಮಾಡಿ 65 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ ಎಂದು ಕಥೆ ಕಟ್ಟಿದನು. ಅದಕ್ಕೆ 40 ಲಕ್ಷ ರೂ. ಕಾರ್ಕಳ ಎಸ್ಸೈ ನಾಸೀರ್ ಹುಸೇನ್ ಮತ್ತು ಸಿಬ್ಬಂದಿ ಮಂಜುನಾಥ ಅಡಿಗ ನೀಡಿದ್ದು, ಉಳಿದ 25 ಲಕ್ಷ ರೂ.ವನ್ನು ನಾನೇ ಹೊಂದಿಸಿದ್ದೇನೆ. ನಂತರ ಮಂಜಗೆ ಹಣ ನೀಡಿ ಸಹೋದರಿಯನ್ನು ಕರೆದುಕೊಂಡು ಬಂದಿರುವುದಾಗಿ ಸುಳ್ಳು ಹೇಳಿದ್ದನು.

ಮಂಜನ ಕೊಲೆಯ ನಾಟಕ

ಮೇ 8ರಂದು ಅಭಿಲಾಶ್ ತಾಯಿಯ ಕಚೇರಿಗೆ ಬಂದ ಸ್ವರೂಪ್, ಎಸ್ಸೈ ನಾಸೀರ್ ಹುಸೇನ್ ನನಗೆ ಕೊಟ್ಟ ಹಣ ವಾಪಾಸ್ಸು ಕೇಳುತ್ತಿದ್ದು, ನಿಮ್ಮಿಂದಾಗಿ ಮಂಜುಗೆ ಹಣ ಕೊಡಬೇಕಾಯಿತು. ಅದಕ್ಕಾಗಿ 35 ಲಕ್ಷ ರೂ. ಕೊಡಬೇಕು. ಇಲ್ಲದಿದ್ದರೆ ನಿಮ್ಮ ಮಗನ ಮೇಲೆ ಎಸ್ಸೈ ರೇಪ್ ಮತ್ತು ಕಿಡ್ನ್ಯಾಪ್ ಕೇಸ್ ಹಾಕುತ್ತಾರೆ ಎಂದು ಬೆದರಿಸಿದ್ದನು. ಹೀಗೆ ಅಭಿಲಾಶ್ ತಾಯಿಯಿಂದ ಲಕ್ಷಾಂತರ ಹಣ ಪಡೆದಿದ್ದನು.

ಕೆಲ ಸಮಯದ ನಂತರ ಸ್ವರೂಪ್ ಬಂದು, ಕಾರ್ಕಳ ಎಸ್ಸೈ ರೌಡಿ ಮಂಜನನ್ನು ಇಂದ್ರಾಳಿ ರೈಲ್ವೆ ಹಳಿಯಲ್ಲಿ ಕೊಂದಿರುವುದಾಗಿ ಹೇಳಿ ರೈಲ್ವೆ ಹಳಿಯಲ್ಲಿರುವ ಯಾರದ್ದೊ ಮೃತದೇಹದ ಫೋಟೋವನ್ನು ಅಭಿಲಾಶ್‌ಗೆ ತೋರಿಸಿದ್ದನು. ಜೂ.25ರಂದು ಭೂಗತ ಪಾತಕಿ ಹೇಮಂತ ಪೂಜಾರಿ ಹೆಸರಿನಲ್ಲಿ ಸ್ವರೂಪ್, ಅಭಿಲಾಶ್‌ಗೆ ಬೆದರಿಕೆಯ ಸಂದೇಶ ಕಳುಹಿಸಿ, ಮಂಜು ಸಾವಿಗೆ ನೀವೇ ಕಾರಣ ಎಂದು ಹೇಳಿ 20ಲಕ್ಷ ರೂ. ಬೇಡಿಕೆ ಇಟ್ಟು 5,80,000 ರೂ. ಹಣ ಪಡೆದಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅದೇ ರೀತಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಾಂತರ ರೂ.ವನ್ನು ಗೆಳೆಯರಿಗೆ ತೋರಿಸಿ, ಖಾತೆ ಸೀಝ್ ಆಗಿದ್ದು, ಅದನ್ನು ತೆರವುಗೊಳಿಸಲು ಲಕ್ಷಾಂತರ ರೂ. ಹಣ ಬೇಕು ಎಂದು ಹೇಳಿ ಗೆಳೆಯರಿಂದ ಹಣ ಪಡೆದು ವಂಚಿಸುತ್ತಿದ್ದನು. ಐಷಾರಾಮಿ ಜೀವನಕ್ಕಾಗಿ ಈ ರೀತಿ ಮಾಡುತ್ತಿದ್ದ ಸ್ವರೂಪ್ ಆರು ತಿಂಗಳ ಹಿಂದೆ 25 ಸಾವಿರ ರೂ. ಬಾಡಿಗೆಗೆ ಮಣಿಪಾಲದಲ್ಲಿ ಫ್ಲಾಟ್ ಪಡೆದುಕೊಂಡಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.

ಎಸ್ಸೈಯಿಂದಲೇ ಹಣ ಪಡೆದು ವಂಚನೆ

ಕಾರ್ಕಳ ಗ್ರಾಮಾಂತರ ಎಸ್ಸೈ ಪರಿಚಯ ಇದೆ ಎಂದು ಹೇಳಿಕೊಂಡು ಲೌಡ್ ಸ್ಪೀಕರ್‌ನಲ್ಲಿ ಅವರಿಗೆ ಕರೆ ಮಾಡಿ, ಕರೆಯನ್ನು ಸ್ವೀಕರಿಸಿದಾಗ ತಾನೊಬ್ಬನೇ ಅವರೊಂದಿಗೆ ಮಾತನಾಡುತಿದ್ದನು. ಬಳಿಕ ಮಿತ್ರರ ಕೆಲವೊಂದು ದೌರ್ಬಲ್ಯವನ್ನು ಮುಂದಿಟ್ಟು ಕೊಂಡು ಎಸ್ಸೈ ನಿಮ್ಮನ್ನು ಬಿಡಲ್ಲ ಎಂದು ಬೆದರಿಸಿ ಹಣ ಲೂಟಿ ಮಾಡುತ್ತಿದ್ದನು.

ಅಲ್ಲದೆ ಎರಡು ಬಾರಿ ಎಸ್ಸೈ ಅವರಿಂದಲೇ ತಾಯಿಗೆ ಸೌಖ್ಯ ಇಲ್ಲ ಎಂದು ಹೇಳಿ ಹಣ ಪಡೆದು ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖಾಧಿಕಾರಿಗಳು ಎಸ್ಸೈ ಹಾಗೂ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೀಗ ನ್ಯಾಯಾಂಗ ಬಂಧನದಲ್ಲಿರುವ ಸ್ವರೂಪ್‌ನಿಂದ ಪೊಲೀಸರು ಶಿವಮೊಗ್ಗ ಹಾಗೂ ಮಣಿಪಾಲದ ಫ್ಲಾಟ್‌ನಲ್ಲಿದ್ದ ಏಳು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ವಂಚನೆ ಸಂಬಂಧ ಮಣಿಪಾಲ ಮತ್ತು ಪಡುಬಿದ್ರೆಯಲ್ಲಿ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News