ಎ.ಕೆ. ಸುಬ್ಬಯ್ಯ ನಿಧನ; ಜಮಾಅತೆ ಇಸ್ಲಾಮ್ ಸಂತಾಪ
Update: 2019-08-27 21:22 IST
ಉಡುಪಿ, ಆ.27: ಹಿರಿಯ ರಾಜಕಾರಣಿ, ಸಾಮಾಜಿಕ ಚಿಂತಕ ಎ.ಕೆ. ಸುಬ್ಬಯ್ಯ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ.ಸಾದ್ ಬೆಳ್ಗಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಾತ್ಯತೀತ ಮೌಲ್ಯಗಳ ಉಳಿವಿಗಾಗಿ ಬದುಕಿನ ಒಂದು ಬಹುದೀರ್ಘ ಭಾಗವನ್ನು ಮೀಸಲಿಟ್ಟ ಮತ್ತು ಸತ್ಯವನ್ನು ಎದೆಗುಂದದೇ ಹೇಳುವ ಛಾತಿಯನ್ನು ತೋರಿಸಿದ ಎ ಕೆ ಸುಬ್ಬಯ್ಯ ಅವರು ನಾಡಿನ ಬಹುತ್ವದ ರಾಯಭಾರಿಯಾಗಿ ಗುರುತಿಸಿಕೊಂಡಿದ್ದರು. ಮಾನವ ಪ್ರೇಮಿ ಸಿದ್ಧಾಂತವನ್ನು ಹುಡುಕುತ್ತಾ ಅವರು ಅಲೆದರು. ಈ ಅಲೆದಾಟದಲ್ಲಿ ಸರಿಯಾದ ಸಿದ್ಧಾಂತ ಯಾವುದು ಎಂಬುದನ್ನು ಸ್ಪಷ್ಟಪಡಿಸಿಕೊಂಡ ಬಳಿಕ ಅವರು ಅದನ್ನು ಹೇಳಲು ಹಿಂಜರಿಯಲಿಲ್ಲ. ಇಂಥ ಧೀಮಂತರು ಅಪರೂಪದಲ್ಲಿ ಅಪರೂಪ. ಅವರ ಮರಣವು ಈ ಕಾರಣಕ್ಕಾಗಿ ಅತ್ಯಂತ ದುಃಖದಾಯಕವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.