ಟಿಎಂಸಿ ಕಾರ್ಯಕರ್ತರು, ಪೊಲೀಸರ ಮೇಲೆ ಹಲ್ಲೆ ನಡೆಸಿ: ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಕರೆ!
ಕೊಲ್ಕತ್ತಾ, ಆ.27: “ನಿಮ್ಮ ಮೇಲೆ ದಾಳಿ ನಡೆಸಿದರೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿ, ಮುಂದಿನ ಪರಿಣಾಮಗಳನ್ನು ನಿಭಾಯಿಸುತ್ತೇವೆ” ಎಂದು ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಿದ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಿವಾದ ಸೃಷ್ಟಿಸಿದ್ದಾರೆ.
ಸದ್ಯ ಸಿಬಿಐ ಕಸ್ಟಡಿಯಲ್ಲಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂರ ಸ್ಥಿತಿ ನಿಮಗೂ ಬರಬಹುದು ಎಂದು ಇದೇ ಸಂದರ್ಭ ಅವರಿ ಟಿಎಂಸಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ರೀತಿಯ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದಕ್ಕಾಗಿ ಪೊಲೀಸರು ಘೋಷ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ಟಿಎಂಸಿ ಗೂಂಡಾಗಳು ಮತ್ತು ಪೊಲೀಸರನ್ನು ಹೆದರಬೇಡಿ. ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ದುಷ್ಕರ್ಮಿಗಳನ್ನು ಬಂಧಿಸುವ ಬದಲು ಪೊಲೀಸರು ಯುವಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಿದ್ದಾರೆ. ನಿಮ್ಮ ಮೇಲೆ ದಾಳಿ ನಡೆದರೆ, ಟಿಎಂಸಿ ಕಾರ್ಯಕರ್ತರು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿ. ಹೆದರಬೇಡಿ. ಯಾವುದೇ ಸಮಸ್ಯೆಯಾದರು ನಾವು ನೋಡಿಕೊಳ್ಳುತ್ತೇವೆ” ಎಂದವರು ಹೇಳಿದರು.