ಪಿಎಫ್ ಹಣ ತೆಗೆಯಲು ಸಮಸ್ಯೆ; ಗೇರುಬೀಜ ಕಾರ್ಖಾನೆಗಳಲ್ಲಿ ಕಾನೂನು ಶಿಬಿರಕ್ಕೆ ಸೂಚನೆ
ಉಡುಪಿ, ಆ.27: ಜಿಲ್ಲೆಯಲ್ಲಿರುವ ಗೇರುಬೀಜ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಮಹಿಳೆಯರೇ ಅಧಿಕವಿರುವ ಬಡ ಕಾರ್ಮಿಕರಿಗೆ ಅವರ ಪಿಎಫ್ ಹಣ ಪಡೆಯಲು ಕಾನೂನಿನ ತೊಡಕು ಎದುರಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಇಂದು ನಡೆದ ಉಡುಪಿ ಜಿಪಂನ 17ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಜ್ಯೋತಿ ಹರೀಶ್, ಬಾಬು ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ ಒತ್ತಾಯಿಸಿದರು.
ವಿಷಯ ಪ್ರಸ್ತಾಪಿಸಿದ ಪ್ರತಾಪ್ ಹೆಗ್ಡೆ, ಈಗ ಗೇರುಬೀಜ ಕಾರ್ಖಾನೆಗಳಲ್ಲಿ ಪಿಎಫ್‌ನ್ನು ಕಡ್ಡಾಯ ಮಾಡಲಾಗಿದೆ. ಹಿಂದೆ ಪಿಎಫ್ ಮಾಡುವಾಗ ಆಧಾರ ಕಾರ್ಡ್ ಕಡ್ಡಾಯವಿರಲಿಲ್ಲ. ಆದರೆ ಈಗ ಹಣ ಹಿಂಪಡೆಯುವಾಗ ಆಧಾರ ಕಡ್ಡಾಯವಾಗಿದೆ. ಇದರಲ್ಲಿ ಅವರ ಜನ್ಮದಿನಾಂಕ, ಹೆಸರು ತಾಳೆಯಾಗುತ್ತಿಲ್ಲ. ಶಾಲೆಗೆ ಹೋಗದ ಇವರಿಗೆ ಜನ್ಮದಿನದ ದಾಖಲೆ ಪಡೆಯುವ ಯಾವ ಮಾರ್ಗವೂ ಇಲ್ಲ. ಹೀಗಾಗಿ ಅವರಿಗೆ ಅವರ ಹಣ ಪಡೆಯಲು ಸಾಧ್ಯವಾಗು ತ್ತಿಲ್ಲ ಎಂದು ಅವರು ದೂರಿದರು.
ಇದಕ್ಕೆ ಉತ್ತರಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಮಧುಕೇಶ್ವರ್, ಯಾವುದೇ ದಾಖಲೆ ಇಲ್ಲದೆ ಇದ್ದರೆ ಹುಟ್ಟಿದ ದಿನಾಂಕ ಪಡೆಯಲು ಕೆಲವೊಂದು ನಿಗದಿತ ದಾಖಲೆಗಳಿದ್ದು, ಅದನ್ನು ಗಜೆಟೆಡ್ ಅಧಿಕಾರಿ ದೃಢೀಕರಿಸಿ, ಸಿವಿಲ್ ಕೋರ್ಟ್‌ನಲ್ಲಿ ಹುಟ್ಟಿದ ದಿನಾಂಕ ಲಭ್ಯವಿಲ್ಲವೆಂದು ಬರೆಸಿಕೊಂಡು ಬರಬೇಕು. ಸಿವಿಲ್ ಕೋರ್ಟ್ ನೀಡಿದ ದೃಢೀಕರಣ ಶಾಶ್ವತ ದಾಖಲೆಯಾಗುತ್ತದೆ ಎಂದರು.
ಇದಕ್ಕಾಗಿ ಗ್ರಾಪಂಗಳ ಮೂಲಕ ಪ್ರತಿ ಗೇರುಬೀಜ ಕಾರ್ಖಾನೆಗಳಲ್ಲಿ ಅಲ್ಲಿನ ಕಾರ್ಮಿಕರಿಗೆ ಕಾನೂನು ಅರಿವು ಶಿಬಿರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಏರ್ಪಡಿಸಿ ಅಗತ್ಯ ನೆರವು ಒದಗಿಸುವುದಾಗಿ ಅವರು ನುಡಿದರು.