ಬಂಟ್ವಾಳ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ
ಬಂಟ್ವಾಳ, ಆ. 27: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಜಿತ ಭವನದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯು ನಡೆಯಿತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಮಾತನಾಡಿ, ಕರಾಟೆ ಕೇವಲ ಪ್ರದರ್ಶನಕ್ಕಾಗಿ ಅಲ್ಲ. ಬದಲಾಗಿ ಅದೊಂದು ಆತ್ಮ ರಕ್ಷಣೆಯ ಕಲೆಯೂ ಆಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ್ಕೆ ಸೀಮಿತವಾಗದೆ ಆಟೋಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
14 ಮತ್ತು 17ರ ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯಲ್ಲಿ ವಿವಿಧ ಶಾಲೆಯಿಂದ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಲಕ ವಸಂತಮಾಧವ, ಸಹ ಸಂಚಲಕ ರಮೇಶ್ ಎನ್, ರಾಷ್ಟ್ರೀಯ ಕರಾಟೆ ತೀರ್ಪುಗಾರ ರಾದ ಧರ್ನಪ್ಪ, ದಿನೇಶ್, ಶ್ರೀರಾಮ ಪ್ರಾಥಮಿಕ ಶಾಲಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಕಾರ್ಯದರ್ಶಿ ಜಯರಾಮ ರೈ, ಬಾಳ್ತಿಲ ವಲಯದ ಸಂಪನ್ಮೂಲ ವ್ಯಕ್ತಿ ಆರತಿ, ಶಾಲಾ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ವೇದಿಕೆಯಲ್ಲಿದ್ದರು.
ಶ್ರೀರಾಮ ಪ್ರಾಥಮಿಕ ಶಾಲೆಯ ಅಧ್ಯಾಪಕ ರಕ್ಷಿತಾ ನಿರೂಪಿಸಿದರು. ರಾಧಿಕ ಸ್ವಾಗತಿಸಿ, ದಿವ್ಯಾ ವಂದಿಸಿದರು.