×
Ad

ಸ್ವಚ್ಛ ಸರ್ವೇಕ್ಷಣ: ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ

Update: 2019-08-27 22:38 IST

ಮಂಗಳೂರು, ಆ. 27: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮ ನೈರ್ಮಲ್ಯ ಸುಧಾರಣೆಯ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2019’ರ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಿದ್ದು, ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿ ಸಮೀಕ್ಷೆ ಕೈಗೊಳ್ಳಲಿದೆ.

ಸರಕಾರ ನಿಯೋಜಿಸಿದ ‘ಇಪಿಸೋಸ್ ರಿಸರ್ಚ್ ಪ್ರೈ.ಲಿ.’ ತಂಡವು ಜಿಲ್ಲೆಯ ಗ್ರಾಮಗಳಿಗೆ ಭೇಟಿ ನೀಡಿ ನಿಗದಿಗೊಳಿಸಿದ ಮಾನದಂಡಗಳ ಅನ್ವಯ ಪರಿಶೀಲನೆ ನಡೆಸಲಿದ್ದು, ನೈರ್ಮಲ್ಯದ ಬಗ್ಗೆ ಮೌಲ್ಯಮಾಪನ ಮಾಡಿ ಜಿಲ್ಲೆಗಳಿಗೆ ಶ್ರೇಣಿ ನೀಡಲಿದ್ದಾರೆ. ಉತ್ತಮ ಶ್ರೇಣಿ ಪಡೆದ ರಾಜ್ಯ ಮಟ್ಟ ಮತ್ತು ಜಿಲ್ಲೆಗಳಿಗೆ ಅಕ್ಟೋಬರ್ 2ರಂದು ನವದಿಲ್ಲಿ ನಡೆಯುವ ಗಾಂಧಿಜಯಂತಿ ಕಾರ್ಯಕ್ರಮದಂದು ಪುರಸ್ಕಾರ ನೀಡಿ ಗೌರವಿಸಲಿದೆ.

ಆ.15ರಿಂದ ಸೆಪ್ಟಂಬರ್ 15ರವರೆಗೆ ಸಮೀಕ್ಷೆ ನಡೆಯುತ್ತಿದ್ದು, ಈ ಸಂದರ್ಭ ಗ್ರಾಮಗಳಲ್ಲಿರುವ ಶಾಲೆ, ಅಂಗನವಾಡಿ, ಸಾರ್ವಜನಿಕ ಸ್ಥಳಗಳು, ಜನವಸತಿ ಪ್ರದೇಶಗಳಲ್ಲಿ ನಿರ್ಮಿಸಿರುವ ಸಮುದಾಯ ಶೌಚಾಲಯ ಬಳಕೆ/ನಿರ್ವಹಣೆ, ಮಾರುಕಟ್ಟೆ, ಧಾರ್ಮಿಕ ಕೇಂದ್ರಗಳು ಇತ್ಯಾದಿ ಪ್ರದೇಶಗಳನ್ನು ಸುಸ್ಥಿತಿಯಲ್ಲಿಟ್ಟು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸಬೇಕು.

ಸಾಕ್ಷರತೆ ಮತ್ತು ಸ್ವಚ್ಛತೆಯಲ್ಲಿ ರಾಷ್ಟ್ರ ಮಟ್ಟದಲ್ಲೇ ಗುರುತಿಸಿಕೊಂಡ ಜಿಲ್ಲೆಯ ಸ್ಥಾನವನ್ನು ‘ಸ್ವಚ್ಚ ಸರ್ವೇಕ್ಷಣ ಗ್ರಾಮೀಣ-2019’ರ ಕಾರ್ಯಕ್ರಮದಲ್ಲಿ ಉತ್ತಮ ಶ್ರೇಣಿ ಪಡೆಯಲು ಜಿಲ್ಲೆಯ ನಾಗರಿಕರು ಕೈಜೋಡಿಸಬೇಕು ಎಂದು ಜಿಪಂ ಸಿಇಒ ಪ್ರಕಟನೆ ತಿಳಿಸಿದೆ.

ನೀವೇನು ಮಾಡಬೇಕು ?

ಸೆ.15ರವರೆಗೆ ದೇಶದಾದ್ಯಂತ ಚಾಲನೆಯಲ್ಲಿರುವ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2019ರ ಆಂದೋಲನದ ಭಾಗವಾಗಿ ಜಿಲ್ಲೆಯ ಎಲ್ಲ ನಾಗರಿಕರು ತಮ್ಮ ಮೊಬೈಲ್‌ನ ‘ಗೂಗಲ್ ಪ್ಲೇ ಸ್ಟೋರ್’ನಲ್ಲಿ ‘SSG-2019' ಆ್ಯಪ್‌ನ್ನು ಡೌನ್‌ಲೋಡ್ ಮಾಡಿ, ನಾಲ್ಕು ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಥವಾ ಟೋಲ್ ಫ್ರೀ ಸಂಖ್ಯೆ 18005720112ಗೆ ಕರೆ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ನೀಡಿ ಜಿಲ್ಲೆಯು ರಾಷ್ಟ್ರದಲ್ಲಿ ಉತ್ತಮ ಶ್ರೇಣಿ ಪಡೆಯಲು ಸಹಕರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News