×
Ad

ಮಂಗಳೂರು: ಸರ್ಕಲ್ ತೆರವಿಗೆ ಆಗ್ರಹ

Update: 2019-08-28 18:45 IST

ಮಂಗಳೂರು, ಆ.28: ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ವಾಹನದಟ್ಟಣೆಯೂ ಹೆಚ್ಚಾಗುತ್ತಿದೆ. ನಗರದ ಹೆಚ್ಚಿನ ರಸ್ತೆಗಳಲ್ಲಿ ಪ್ರತಿನಿತ್ಯ ಪದೇ ಪದೇ ವಾಹನಗಳು ಬ್ಲಾಕ್ ಆಗುತ್ತಿವೆ. ಬೃಹತ್ ಸರ್ಕಲ್‌ಗಳೇ ಇದಕ್ಕೆ ಕಾರಣ. ನಗರದಲ್ಲಿನ ಸರ್ಕಲ್‌ಗಳನ್ನು ತೆರವುಗೊಳಿಸಬೇಕು ಎಂದು ಮಾಜಿ ಶಾಸಕ ಕೆ.ವಿಜಯಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.

ನಗರದ ವಿವಿಧೆಡೆಯ ಬೃಹತ್ ಸರ್ಕಲ್‌ಗಳಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಗಂಟೆಗಟ್ಟಲೇ ವಾಹನಗಳ ಸಂಚಾರ ಅಸ್ತವ್ಯಸ್ಥಗೊಳ್ಳುತ್ತಿದೆ. ಇದರಿಂದ ಸಾರ್ವಜನಿಕರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜು ತಲುಪಲಾಗುತ್ತಿಲ್ಲ. ಇಲ್ಲಿನ ವಾಹನ ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಂತಹ ಮುಖ್ಯ ನಗರಗಳಲ್ಲಿ ಹೆಚ್ಚಿನ ಸರ್ಕಲ್‌ಗಳನ್ನು ತೆಗೆಯಲಾಗಿದೆ. ಎಂಟು ರಸ್ತೆಗಳು ಕೂಡುವ ಜನನಿಬಿಡ ಪ್ರದೇಶದ ಹಡ್ಸನ್ ಸರ್ಕಲ್ ತೆಗೆದುದರಿಂದ ಆ ಪ್ರದೇಶದಲ್ಲಿ ವಾಹನ ಸಂಚಾರ ಸುಗಮವಾಗಿದೆ. ಅದೇ ಮಾದರಿಯಲ್ಲಿ ಮಂಗಳೂರು ನಗರದ ಎಲ್ಲ ಸರ್ಕಲ್‌ಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ನಗರದ ಸಿಗ್ನಲ್ ಲೈಟ್ ಪಕ್ಕದ ಮತ್ತು ಜ್ಯೋತಿ ಚಿತ್ರಮಂದಿರ ಹತ್ತಿರದ ಅಂಬೇಡ್ಕರ್ ಸರ್ಕಲ್ ಸಂಪೂರ್ಣ ತೆಗೆಯಲಾಗಿದೆ. ಅಲ್ಲಿ ವಾಹನ ಸಂಚಾರ ಸುಗಮವಾಗಿದೆ. ಶಿವಭಾಗ್ ಸರ್ಕಲ್ ತೆಗೆದು ಕಬ್ಬಿಣದ ಪೈಪುಗಳಿಂದ ತಯಾರಿಸಿದ ಸರ್ಕಲ್‌ನ್ನು ನಿರ್ಮಿಸಬೇಕು. ಇಲ್ಲಿ ಜಾಹೀರಾತು ಪ್ರಕಟಿಸುವುದಿರಂದ ಪಾಲಿಕೆಗೆ ಲಾಭದಾಯಕ. ಲೇಡಿಹಿಲ್ ಸರ್ಕಲ್‌ನ್ನು ಇತ್ತೀಚೆಗೆ ತೆಗೆಯಲಾಗಿದ್ದು, ಶಿವಭಾಗ್‌ನಂತೆ ಜಾಹೀರಾತು ವೃತ್ತ ಹಾಕಿದರೆ ಉತ್ತಮ ಎಂದು ಸಲಹೆ ನೀಡಿದರು.

ಕದ್ರಿ ದೇವಸ್ಥಾನದ ದ್ವಾರದ ಬಳಿ, ಮಾನರ್ಮಿಕಟ್ಟೆ, ನಂದಿಗುಡ್ಡೆ, ಎ.ಬಿ.ಶೆಟ್ಟಿ ಸರ್ಕಲ್, ಹ್ಯಾಮಿಲ್ಟನ್ ಸರ್ಕಲ್, ನವಭಾರತ್ ಹೀಗೆ ಅನೇಕ ಬೃಹತ್ ಸರ್ಕಲ್‌ಗಳಿವೆ. ಇವೆಲ್ಲವನ್ನೂ ತೆಗೆದು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಜಿಲ್ಲಾಧಿಕಾರಿ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News