ಬಂಟ್ವಾಳ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ
ಬಂಟ್ವಾಳ, ಆ. 28: ಬಂಟ್ವಾಳ ತಾಲೂಕಿನ ನೆರೆಪೀಡಿತ ಪ್ರದೇಶಗಳಲ್ಲಿ ಇನ್ನು ಮುಂದೆ ಮನೆ ಕಟ್ಟಲು ಅವಕಾಶ ನೀಡದಿರಲು ಗ್ರಾಮ ಪಂಚಾಯತ್‍ಗೆ ಸೂಚನೆ ನೀಡುವಂತೆ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಪ್ರಸನ್ನ ಅವರು ಬುಧವಾರ ಬಂಟ್ವಾಳ ತಾಲೂಕು ಪಂಚಾಯತ್‍ನ ಎಸ್‍ಜಿಎಸ್‍ವೈ ಸಭಾಂಗಣದಲ್ಲಿ ನಡೆದ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಲಹೆ ನೀಡಿದರು.
ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಈ ಮೊದಲು ನಾವೂರು, ಸರಪಾಡಿ, ಕಡೇಶ್ವಾಲ್ಯ ಮೊದಲಾದ ನೆರೆ ಪೀಡಿತ ಪ್ರದೇಶಗಳಲ್ಲಿ 30 ಮನೆಗಳಿದ್ದವು. ಈಗ 74 ಮನೆಗಳು ನಿರ್ಮಾಣವಾಗಿದೆ. ನೆರೆ ಸಂದರ್ಭದಲ್ಲಿ ನೀರು ಒಮ್ಮಲೇ ಉಕ್ಕಿ ನೆರೆಪೀಡಿತ ಪ್ರದೇಶವನ್ನು ಅವರಿಸಿದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗುತ್ತವೆ ಎಂದು ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಯ್ಕ್, ಈ ಸಲಹೆಗೆ ಸಮ್ಮತಿಸಿ ನೇತ್ರಾವತಿ ನೀರಿನ ಅಪಾಯಮಟ್ಟ 8.5 ಮೀ. ಆಗಿರುವುದರಿಂದ ಈ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದಾಗ ಸಭೆಯಲ್ಲಿದ್ದ ಸದಸ್ಯರು ಬೆಂಬಲಿಸಿದರು.
ಬಂಟ್ವಾಳದಲ್ಲಿ ಶೈತ್ಯಾಗಾರವಿಲ್ಲ: ಅಪರಿಚಿತ ಸಹಿತ ವಿವಿಧ ಘಟನೆಗೆ ಸಂಬಂಧಿಸಿದ ಮೃತದೇಹವನ್ನು ಇರಿಸಲು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶೈತ್ಯಾಗಾರ ಘಟಕ ನಿರ್ಮಿಸುವ ಅಗತ್ಯವನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಪ್ರಸನ್ನ ಕುಮಾರ್ ಅವರು ಸಭೆಯಲ್ಲಿ ಪ್ರಸ್ತಾವಿಸಿದರು.
ನಮ್ಮ ಠಾಣಾ ವ್ಯಾಪ್ತಿಯಲ್ಲಿ ಕಂಡುಬರುವ ಅಪರಿಚಿತ ಶವಗಳನ್ನು ಖಾಸಗಿ ಆಸ್ಪತ್ರೆಯ ಶೈತ್ಯಾಗಾರದಲ್ಲಿರಿಸಬೇಕಾಗುತ್ತದೆ. ಇದಕ್ಕೆ ದಿನವೊಂದಕ್ಕೆ ಒಂದೂವರೆ ಸಾವಿರ ಹಾಗೂ ಆಂಬುಲೆನ್ಸ್‍ನ ವೆಚ್ಚವನ್ನು ಪೊಲೀಸ್ ಇಲಾಖೆ ಭರಿಸಬೇಕಾಗುತ್ತದೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ಶೈತ್ಯಾಗಾರದ ಅಗತ್ಯವಿದ್ದು, ಈ ಬಗ್ಗೆ ಈಗಾಗಲೇ ಎಂಆರ್ ಪಿಎಲ್ ಸಂಸ್ಥೆಗೆ ಪ್ರಸ್ತಾವ ಕಳುಹಿಸಲಾಗಿದೆ ಎಂದಾಗ, ಘಟಕದ ಶೀಘ್ರ ಸ್ಥಾಪನೆಗೆ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದರು.
82 ಡೆಂಗ್ ಪ್ರಕರಣ ಪತ್ತೆ: ತಾಲೂಕಿನಲ್ಲಿ 82 ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಕೂಡ ಗುಣಮುಖರಾಗಿ ಆರೋಗ್ಯದಿಂದ ಮನೆಯಲ್ಲಿದ್ದಾರೆ. ಯಾರು ಕೂಡ ಡೆಂಗ್‍ನಿಂದ ಸಾವನ್ನಪ್ಪಿರುವ ಪ್ರಕರಣ ದಾಖಲಾಗಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಸ್ಪಷ್ಟಪಡಿಸಿದರು.
ಆಗ ಮಧ್ಯಪ್ರವೇಶಿಸಿದ ಜಿಪಂ ಸದಸ್ಯೆ ಮಂಜುಳಾ ಮಾವೆ ಸಾಲೆತ್ತೂರಿನ ಬಾಲಕಿಯೊಬ್ಬಳು ಡೆಂಗ್ ಮೃತಪಟ್ಟಿರುವುದಾಗಿ ಅನುಮಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಡಾ.ದೀಪಾ ಪ್ರಭು, ಶಂಕಿತ ಡೆಂಗ್ ಜ್ವರದಿಂದ ಸಾಲೆತ್ತೂರಿನ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯುಗೊಂಡಿದ್ದಳು. ಎರಡು ದಿನಗಳ ಬಳಿಕ ಆ ಬಾಲಕಿಗೆ ಮೃತಪಟ್ಟಿದ್ದು, ಬಾಲಕಿಯ ಶ್ವಾಸಕೋಶದ ಮತ್ತು ಉಸಿರಾಟದ ತೊಂದೆರೆಯಿಂದ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಚಿಕಿತ್ಸಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
'ಮಾತು ಆಲಿಸುವಷ್ಟು ತಾಳ್ಮೆ ಇಲ್ಲ': ವಾಮದಪದವು, ಪುಂಜಾಲಕಟ್ಟೆ ಪರಿಸರದ ತೀವ್ರ ನಿಗಾಕ್ಕೊಳಗಾದ ರೋಗಿಗಳನ್ನು ಮತ್ತು ಮರಣೋತ್ತರ ಪರೀಕ್ಷೆಯನ್ನು ಆಯಾ ಸಮುದಾಯ ಕೇಂದ್ರದಲ್ಲಿಯೇ ನಡೆಸುವಂತೆ ಆರೋಗ್ಯಧಿಕಾರಿ ದೀಪಾ ಪ್ರಭು ಅವರು ಪೊಲೀಸರಿಗೆ ಸಲಹೆ ನೀಡಿದಾಗ, ಇದಕ್ಕೆ ಅಂತಹ ಸನ್ನಿವೇಶದಲ್ಲಿ ಸಂಬಂಧಿಸಿದ ಕುಟುಂಬಕ್ಕೆ ಭಾವನೆಯೇ ಮುಖ್ಯವಾಗುತ್ತದೆ. ಆಗ ನಮ್ಮ ಮಾತು ಆಲಿಸುವಷ್ಟು ತಾಳ್ಮೆ ಅವರಲ್ಲಿರುವುದಿಲ್ಲ ಎಂದು ಎಸ್ಸೈ ಚಂದ್ರಶೇಖರ್ ಅವರು ಸಭೆಗೆ ತಿಳಿಸಿದರು.
'ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿಯನ್ನು ನೇಮಿಸಿ': ಆರೋಗ್ಯ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಿದರೆ ಸಾಲದು, ವೈದ್ಯರ ಸಹಿತ ಮೂಲ ಸೌಕರ್ಯ ಹಾಗೂ ಪ್ರತಿ ಆರೋಗ್ಯ ಕೇಂದ್ರಕ್ಕೆ ಲ್ಯಾಬ್ ಟೆಕ್ನೀಷಿಯನ್, ಫಾರ್ಮಸಿ, ನಸ್9ಗಳನ್ನು ನೇಮಿಸುವಂತೆ ಸದಸ್ಯ ಎಂ.ಎಸ್.ಮುಹಮ್ಮದ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಶಾಸಕರು ಮಂಚಿ ಆರೋಗ್ಯ ಕೇಂದ್ರವನ್ನು ಶೀಘ್ರವೇ ಆರೋಗ್ಯ ಸಚಿವರ ಮೂಲಕ ಲೋಕಾರ್ಪಣೆಗೊಳಿಸಲಾಗುವುದು. ವೈದ್ಯರ ಸಹಿತ ಇತರ ಸಿಬಂದಿ ನೇಮಕದ ಬಗ್ಗೆಯು ಈಗಾಗಲೇ ಚರ್ಚಿಸಲಾಗಿದೆ ಎಂದರು.
507 ಮನೆಗೆ ಪರಿಹಾರ: ಮಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿ ಕರೋಪಾಡಿ ಗ್ರಾಮದಲ್ಲಿ ಪೂರ್ಣಪ್ರಮಾಣದಲ್ಲಿ ಮನೆಯೊಂದು ಹಾನಿಯಾಗಿದ್ದು, ಈ ಸಂತ್ರಸ್ಥರಿಗೆ ನಯಾಪೈಸೆ ಪರಿಹಾರಧನ ವಿತರಣೆಯಾಗದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಒಂದು ಹಂತದಲ್ಲಿ ಈ ಮನೆಯನ್ನು ಗುರುತಿಸದ ಕಂದಾಯ ಅಧಿಕಾರಿಯನ್ನು ಶಾಸಕರು ಹಾಗೂ ಜಿಪಂ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಈಗಾಗಲೇ ತಾಲೂಕಿನಲ್ಲಿ 507 ನೆರೆಪೀಡಿತ ಮನೆಗಳಿಗೆ ತಲಾ 10 ಸಾವಿರ ರೂ.ವಿನಂತೆ ಪರಿಹಾರ ಧನ ವಿತರಣೆ ಮಾಡಲಾಗಿದೆ. ಮಳೆ ಹಾನಿ ಸಂಬಂಧಿಸಿದ ಪ್ರಕರಣದ ವರದಿಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ಉಪತಹಶೀಲ್ದಾರ್ ರಾಜೇಶ್ ಸಭೆಯ ಗಮನಕ್ಕೆ ತಂದರು.
ಆಗ ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಅವರು ಪ್ರಸ್ತಾವಿಸಿ, ಕರೋಪಾಡಿಗ್ರಾಮದಲ್ಲಿ ಒಂದು ಸಂಪೂರ್ಣಹಾನಿಯಾಗಿದ್ದು, ಅವರನ್ನು ಇನ್ನು ಇಲಾಖೆ ಗುರುತಿಸಿಲ್ಲ. ಅವರಿಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ ಎಂದು ದೂರಿದರು. ಇದರಿಂದ ಅಸಮಧಾನಗೊಂಡ ಶಾಸಕ ರಾಜೇಶ್ ನಾಯ್ಕ್, ನೆರೆ ಸಂತ್ರಸ್ಥರಿಗೆ ಪೂರ್ಣಪ್ರಮಾಣದಲ್ಲಿ ಸ್ಪಂದಿಸುತ್ತಿರುವಾಗ ಅಧಿಕಾರಿ ಬೇಜಾವಬ್ದಾರಿಯಿಂದ ನಮಗೆ ಕಳಂಕ ಬರುವಂತಾಗಿದೆ.
ತಾನು ಕೂಡ ಈ ಮನೆಯನ್ನು ಪರಿಶೀಲಿಸಿದ್ದೇನೆ ತಕ್ಷಣ ಅವರಿಗೆ ಸರಕಾರದ ಕಿಟ್ ಮತ್ತು ಪರಿಹಾರಧನ ವಿತರಣೆಗೆ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿದರು.
ಜಿಪಂ ಸದಸ್ಯರಾದ ಮಮತಾಗಟ್ಟಿ, ತುಂಗಪ್ಪ ಬಂಗೇರ ಆಯಾ ವ್ಯಾಪ್ತಿಯಲ್ಲಾದ ಮಳೆಹಾನಿ ವಿಷಯ ಸಂಬಂಧಿಸಿ ಭಾಗಶ: ಮನೆಗಳನ್ನು ಗುರುತಿಸಿ ಅದನ್ನು ಪೂರ್ಣ ಹಾನಿಯೆಂದು ಪರಿಗಣಿಸಿ ಸರಕಾರದ 5 ಲಕ್ಷ ರೂ. ದೊರಕಿಸುವಂತೆ ಆಗ್ರಹಿಸಿದರು. ಸಂತ್ರಸ್ತನಿಗೆ ವಾಸಕ್ಕೆ ಯೋಗ್ಯವಿಲ್ಲದೆ ಇರುವುದು ಕಂಡುಬಂದರೆ ಕಾನೂನು ಪ್ರಕಾರ ಪರಿಹಾರ ನೀಡುವ ಬಗ್ಗೆ ಶಾಸಕರು ಭರವಸೆ ನೀಡಿದರು.
ಇತರ ಚರ್ಚೆಗಳು: ಅಂಗನವಾಡಿ ಅವ್ಯವಸ್ಥೆ, ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಸಮವಸ್ತ್ರ, ಸೈಕಲ್, ಶೂ ಇನ್ನು ವಿತರಣೆಯಾಗದಿರುವುದು, ಬಹುಗ್ರಾಮಕುಡಿಯುವ ನೀರಿನ ಯೋಜನೆಯ ಅಪೂರ್ಣ ಕಾಮಗಾರಿ ಹಾಗೂ ಮೆಸ್ಕಾಂ ಸಹಿತ ವಿವಿಧ ಇಲಾಖೆಯ ಪಾಲನವರದಿ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ವೇದಿಕೆಯಲ್ಲಿದ್ದರು. ಜಿಪಂ ಸದಸ್ಯರಾದ ರವೀಂದ್ರ ಕಂಬಳಿ, ಕಮಾಲಾಕ್ಷಿ ಪೂಜಾರಿ, ಮಂಜುಳಾ ಮಾವೆ, ತುಂಗಪ್ಪ ಬಂಗೇರ ಅವರು ಚರ್ಚೆಯಲ್ಲಿ ಪಾಲ್ಗೊಂಡರು. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.
ಮುಗಿಯದ ಸರ್ವರ್ ಸಮಸ್ಯೆ: ಸರ್ವರ್ ಸಮಸ್ಯೆಯಿಂದ 406 ಪಡಿತರ ಚೀಟಿ ಅರ್ಜಿಗಳು ವಿಲೇಗೆ ಬಾಕಿಯಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿ ಸಭೆಯ ಮುಂದಿಟ್ಟಾಗ ಮಧ್ಯಪ್ರವೇಶಿಸಿದ ಜಿಪಂ ಸದಸ್ಯ ತುಂಗಪ್ಪ ಬಂಗೇರ, ಯಾವಾಗಲೂ ಸರ್ವರ್ ಸಮಸ್ಯೆಯಿಂದ ಜನಸಾಮಾನ್ಯರು ತೊಂದರೆಯಾಗುತ್ತಿದ್ದು, ಇದು ಯಾವಾಗ ಪರಿಹಾರವಾಗುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಯ್ಕ್ ಸರಕಾರದ ಎಲ್ಲ ಯೋಜನೆಗಳು ಆನ್‍ಲೈನ್ ಮೂಲಕವೇ ನಡೆಯುವುದರಿಂದ ಸರ್ವರ್ ಸಮಸ್ಯೆ ಗುರುತಿಸಿ, ಸರ್ವರ್ ಸಾಮರ್ಥ್ಯ ವಿಸ್ತರಿಸುವಂತೆ ತಿಳಿಸಿದರು.
ಮರಕಡಿತಲೆ: ತನಿಖೆಗೆ ಒತ್ತಾಯ
ನರಿಗಾನ ಗ್ರಾಮದಲ್ಲಿ ಸುಮಾರು 15 ಎಕರೆಯಲ್ಲಿದ್ದ ಸುಮಾರು 50 ಲಕ್ಷ ರೂ. ಬೆಲೆಯ ಮರಗಳನ್ನು ಕಡಿಯಲಾಗಿದೆ ಎಂದು ಜಿಪಂ ಸದಸ್ಯೆ ಮಮತಾಗಟ್ಟಿ ಸಭೆಯಲ್ಲಿ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಾಮಾಜಿಕ ಅರಣ್ಯಾಧಿಕಾರಿಯವರು 11 ಲಕ್ಷ ರೂ.ವಿಗೆ ಈ ಮರ ಮಾರಾಟವಾಗಿದ್ದು, ಇದರಲ್ಲಿ 1 ಲಕ್ಷ ರೂ. ವಿನಷ್ಟು ಗ್ರಾಪಂಗೆ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಉತ್ತರದಿಂದ ತೃಪ್ತರಾಗದ ಮಮತಾಗಟ್ಟಿ ಇದರಲ್ಲಿ ಏನು ಕಣ್ಣಮುಚ್ಚಾಲೆಯಾಟ ನಡೆದಿದೆ ಎಂದಾಗ, ಅನುಮಾನವಿದ್ದರೆ ಲಿಖಿತ ದೂರು ನೀಡಿದಲ್ಲಿ ತನಿಖೆಗೆ ಆದೇಶಿಸಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ದನದ ವಿಚಾರದಲ್ಲಿ ಗಲಾಟೆ:
ತಾಲೂಕಿನಲ್ಲಿ ದನದ ವಿಚಾರವಾಗಿ ಅಲ್ಲಲ್ಲಿ ಘರ್ಷಣೆ, ಗಲಾಟೆ ನಡೆಯುತ್ತಿದೆ. ಈ ಬಗ್ಗೆ ದನ ಸಾಗಾಟ ಮತ್ತು ಕೊಂಡುಕೊಳ್ಳುವವರ ಮಧ್ಯೆ ಸಮನ್ವಯತೆ ಸಾಧಿಸಬೇಕು ಹಾಗೂ ದನಗಣತಿ ಮಾಡುವಂತೆ ಜಿಪಂ ಸದಸ್ಯೆ ಮಮತಾ ಗಟ್ಟಿ ಒತ್ತಾಯಿಸಿದರು. ಇದಕ್ಕೆ ಪಶುಸಂಗೋಪನಾ ಇಲಾಖಾಧಿಕಾರಿ ಪ್ರತಿಕ್ರಿಯಿಸಿ, ಇಲಾಖಾ ನಿರ್ದೇಶನದಂತೆ ತಾಲೂಕಿನಲ್ಲಿ ದನಗಣತಿ ಮಾಡಲಾಗಿದೆ. ಆಗ ಮತ್ತೆ ಮಧ್ಯಪ್ರವೇಶಿಸಿದ ಮಮತಾಗಟ್ಟಿ ದನದ ವಿಚಾರದಲ್ಲಿ ಹೆಚ್ಚಾಗಿ ಸಭೆಯಲ್ಲಿ ಚರ್ಚೆಯಾಗುತ್ತಿಲ್ಲ. ಈ ಬಗ್ಗೆ ಮಾತನಾಡಲು ಜನಪ್ರತಿನಿಧಿಗಳು ಹಿಂದೇಟುಹಾಕುತ್ತಾರೆ. ಇದರಿಂದಾಗಿ ಶಾಸಕರು ವಿಶೇಷ ಕಾಳಜಿವಹಿಸಿ ಸಂಭಾವ್ಯ ಅನಾಹುತ ತಪ್ಪಿಸುವಂತೆ ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಸಮಕ್ಷಮ ಆಗಿನ ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಸೇರಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.