×
Ad

ಸಕಾಲ ಅರ್ಜಿ ವಿಲೇವಾರಿ ವಿಳಂಬವಾದಲ್ಲಿ ಕ್ರಮ: ​ಉಡುಪಿ ಜಿಲ್ಲಾಧಿಕಾರಿ

Update: 2019-08-28 20:28 IST

ಉಡುಪಿ, ಆ.28: ರಾಜ್ಯದಲ್ಲೇ ಮಾದರಿ ಜಿಲ್ಲೆ ಎನಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ಸಕಾಲ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಕಾಲ ಅರ್ಜಿ ವಿಲೇವಾರಿಯಲ್ಲಿ ವಿಳಂಬ ತೋರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳೊಂದಿಗೆ ಸಕಾಲ ಪ್ರಗತಿ ಪರಿಶೀಲನಾ ಸಭೆ ಮತ್ತು ಆನ್‌ಲೈನ್‌ನಲ್ಲಿ ಸಕಾಲ ಸ್ವಯಂಚಾಲಿತ ಕಾರಣ ಕೇಳುವ ಪ್ರಕ್ರಿಯೆಯ ತರಬೇತಿ ನೀಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.

ಸಕಾಲ ಅರ್ಜಿಗಳ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆಯು ಜುಲೈನಿಂದ ಅಗಸ್ಟ್ ತಿಂಗಳವರೆಗಿನ ಒಂದನೇ ಸ್ಥಾನ ಮತ್ತು ಅರ್ಜಿ ಸ್ವೀಕರಿಸುವುದರಲ್ಲಿ ಹತ್ತನೇ ಸ್ಥಾನದಲ್ಲಿದ್ದು, ಒಟ್ಟು ಸಾಧನೆಯಲ್ಲಿ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯು ಒಂದನೇ ಸ್ಥಾನಕ್ಕೇರುವಂತಾಗಲು ಎಲ್ಲಾ ಇಲಾಖೆಗಳು ನಿಗದಿತ ಅವಧಿಯೊಳಗೆ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜುಲೈ ತಿಂಗಳಲ್ಲಿ ಜಿಲ್ಲೆಯ 158 ಗ್ರಾಪಂಗಳಲ್ಲಿ ಕೇವಲ 400 ಸೇವೆಗಳನ್ನು ಸಕಾಲದಲ್ಲಿ ನೀಡಲಾಗಿದ್ದು, ಇದು ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. ಈ ಬಗ್ಗೆ ಜಿಪಂ ಅಧಿಕಾರಿಗಳು ಎಲ್ಲಾ ಗ್ರಾಪಂಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಸಕಾಲದಲ್ಲಿ ಗುರುತಿಸಲ್ಪಟ್ಟ ಸೇವೆಗಳನ್ನು, ಸಕಾಲ ಹೊರತುಪಡಿಸಿ ನೇರವಾಗಿ ನೀಡುವುದು ಕಂಡು ಬರುತ್ತಿದೆ. ಇಂತಹ ಅರ್ಜಿ ಸ್ವೀಕರಿಸಿ, ವಿಲೇವಾರಿ ಮಾಡುವ ಸಿಬ್ಬಂದಿಗಳನ್ನು ಅಮಾನತು ಮಾಡಲಾಗು ವುದು ಎಂದವರು ಎಚ್ಚರಿಕೆ ನೀಡಿದರು.

ಸಕಾಲ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಕಾರಣ ಕೇಳುವ ನೋಟಿಸನ್ನು ಇನ್ನು ಮುಂದೆ ಆನ್‌ಲೈನ್ ಮೂಲಕವೇ ಸಂಬಂದಪಟ್ಟ ಅಧಿಕಾರಿಗೆ ಕಳುಸಲಾಗುವುದು. ನೋಟೀಸ್ ನೀಡಿದ 7 ದಿನಗಳಲ್ಲಿ ಸಮಂಜಸ ಕಾರಣ ನೀಡಬೇಕು, ಇಲ್ಲವಾದಲ್ಲಿ ಸಕ್ಷಮಪ್ರಾಧಿಕಾರಕ್ಕೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಕೆಯಾಗಲಿದ್ದು, ತಪ್ಪಿತಸ್ಥರೆಂದು ಕಂಡುಬಂದಲ್ಲಿ, ದಂಡದ ಮೊತ್ತವನ್ನು ಪ್ರಕರಣ ಇತ್ಯರ್ಥವಾಗುವ ತನಕವೂ, ನೇರವಾಗಿ ಸಂಬಂಧಪಟ್ಟ ಅಧಿಕಾರಿ/ನೌಕರರ ವೇತನದಲ್ಲಿ ಕಡಿತಗೊಳ್ಳುವ ತಂತ್ರಾಂಶ ಸಹ ಸಿದ್ದವಾಗಿದ್ದು, ಅಗಸ್ಟ್‌ನಿಂದಲೇ ಜಾರಿಗೊಳ್ಳಲಿದೆ. ತಾಂತ್ರಿಕ ಕಾರಣಗಳ ನೆಪ ಒಡ್ಡಿ ಅರ್ಜಿಗಳ ವಿಳಂಬ ವಿಲೇವಾರಿಯನ್ನು ಒಪ್ಪುವುದಿಲ್ಲ. ತಾಂತ್ರಿಕ ಸಮಸ್ಯೆಗಳಿದ್ದರೆ ಸಂಬಂಧ ಪಟ್ಟವರಿಂದ ಸರಿಪಡಿಸಿಕೊಳ್ಳುವಂತೆ ಡಿಸಿ ಸೂಚಿಸಿದರು.

ನಿಗದಿತ ಕಾಲಮಿತಿಯಲ್ಲಿ ಅರ್ಜಿಗಳನ್ನು ಇತ್ಯರ್ಥಗೊಳಿಸುವ ಅಧಿಕಾರಿ ಗಳನ್ನು ಪ್ರತಿ ತಿಂಗಳೂ ಗುರುತಿಸಿ ಅವರಿಗೆ ಸ್ವಯಂಚಾಲಿತವಾಗಿ ಆನ್‌ಲೈನ್‌ನಲ್ಲೆ ಪ್ರಶಂಸಾ ಪತ್ರ ನೀಡಲಾಗುತ್ತದೆ ಎಂದರು.

ಉಡುಪಿಯಲ್ಲಿ ಸಕಾಲ ವಿಲೇವಾರಿಯಲ್ಲಿ ಮೊದಲ ಸ್ಥಾನ ಪಡೆದ ನಂತರ, ಸಾರ್ವಜನಿಕರ ಮನೆ ಬಾಗಿಲಿಗೇ ವಿವಿಧ ಸೇವೆಗಳನ್ನು ಒದಗಿಸುವ ಚಿಂತನೆ ಇದೆ. ಈಗಾಗಲೇ ಹೊಸದಿಲ್ಲಿಯಲ್ಲಿ ನಿಗದಿತ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸವ ವ್ಯವಸ್ಥೆ ಇದ್ದು,ಅದೇ ಮಾದರಿಯನ್ನು ಜಿಲ್ಲೆಯಲ್ಲಿ ಅಳವಡಿಸಿಕೊಳ್ಳುವ ಚಿಂತನೆ ನಡೆದಿದೆ. ಇದು ಯಶಸ್ವಿಯಾಗಿ ಜಾರಿಯಾಗಬೇಕಾದಲ್ಲಿ ಎಲ್ಲಾ ಇಲಾಖೆಗಳು ಸಕಾಲ ಅರ್ಜಿಗಳ ವಿಲೇವಾರಿಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಈಗ ವಿಳಂಬ ವಿಲೇವಾರಿಗಾಗಿ ಶೋಕಾಸ್ ನೋಟಿಸ್ ತೆಗೆದು ಕೊಳ್ಳುತ್ತಿರುವವರೆಲ್ಲರೂ ಮುಂದಿನ ದಿನಗಳಲ್ಲಿ ಪ್ರಶಂಸಾ ಪತ್ರವನ್ನು ತೆಗೆದು ಕೊಳ್ಳುವ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಜಗದೀಶ್ ನುಡಿದರು.

ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್ ಉಪಸ್ಥಿತರಿದ್ದರು. ಜಿಲ್ಲಾ ಸಕಾಲ ಕನ್ಸಲ್ಟೆಂಟ್ ಚೇತನ್ ತರಬೇತಿ ನೀಡಿದರು. ಕಾಲ ಮಿತಿಯೊಳಗೆ ಸಕಾಲ ಅರ್ಜಿಗಳನ್ನು ವಿಲೇವಾರಿ ಮಾಡಿದ 29 ಇಲಾಖೆಗಳ 160 ಅಧಿಕಾರಿಗಳಿಗೆ ಪ್ರಶಂಸಾ ಪತ್ರಗಳನ್ನು ಜಿಲ್ಲಾಧಿಕಾರಿ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News